ಬೆಂಗಳೂರು: ರಾಜರಾಜೇಶ್ವರಿ ನಗರ ಬೈಎಲೆಕ್ಷನ್ ಕಣ ರಂಗೇರುತ್ತಿದ್ದು, ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಈ ಮೂರೂ ಪಕ್ಷಗಳ ಅಭ್ಯರ್ಥಿಗಳು ಬುಧವಾರ ಮಧ್ಯಾಹ್ನ ವೇಳೆಗಾಗಲೇ ನಾಮಪತ್ರ ಸಲ್ಲಿಸಿದರು.
ಅಕ್ಟೋಬರ್ 16 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಇನ್ನು ಎರಡುದಿನ ಬಾಕಿ ಇರುವಂತೆಯೇ ಆರ್ ಆರ್ ನಗರದ ಬಿಬಿಎಂಪಿ ಕಚೇರಿಯಲ್ಲಿ ತಮ್ಮ ತಮ್ಮ ನಾಯಕರೊಂದಿಗೆ ತೆರಳಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಕಾಂಗ್ರೆಸ್ ಶಾಸಕರಾಗಿದ್ದ ಮುನಿರತ್ನ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರಿಂದ ಉಪ ಚುನಾವಣೆ ನಡೆಯುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿರತ್ನ ಈಗ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷದಿಂದ ದಿ. ಐಎಎಸ್ ಅಧಿಕಾರಿ ಡಿ.ಕೆ. ರವಿ ಪತ್ನಿ ಎಚ್. ಕುಸುಮಾ ಹಾಗೂ ಜೆಡಿಎಸ್ ಪಕ್ಷದಿಂದ ಕೃಷ್ಣಮೂರ್ತಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಮುನಿರತ್ನ ನಾಮಪತ್ರ ಸಲ್ಲಿಸಿದ್ದಾರೆ. ಆರ್ ಆರ್ ನಗರದ ಬಿಬಿಎಂಪಿ ಕಚೇರಿಯಲ್ಲಿ ಚುನಾವಣಾಧಿಕಾರಿ ನಾಗರಾಜ್ ಅವರಿಗೆ ನಾಮಪತ್ರ ಸಲ್ಲಿಸಿದ್ದು, ಈ ವೇಳೆ ಡಿಸಿಎಂ ಅಶ್ವಥ್ ನಾರಾಯಣ್, ಸಚಿವ ಆರ್. ಅಶೋಕ್ ಉಪಸ್ಥಿತರಿದ್ದರು. ಅಭ್ಯರ್ಥಿಯೊಂದಿಗೆ ಬರಲು ಇಬ್ಬರಿಗೆ ಮಾತ್ರ ಅವಕಾಶ ಕೊಟ್ಟಿರುವುದರಿಂದ ಸಚಿವರಾದ ಡಾ. ಸುಧಾಕರ್ ಹಾಗೂ ಭೈರತಿ ಬಸವರಾಜ್ ಹೊರೆಗೆ ಉಳಿದರು.
ಕಾಂಗ್ರೆಸ್ ಅಭ್ಯರ್ಥಿಯಾಗಿ ಎಚ್. ಕುಸುಮಾ ನಾಮಪತ್ರ ಸಲ್ಲಿಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಉಪಸ್ಥಿತರಿದ್ದರು. ಇನ್ನು ಜೆಡಿಎಸ್ ಅಭ್ಯರ್ಥಿಯಾಗಿ ಕೃಷ್ಣಮೂರ್ತಿ ನಾಮಪತ್ರ ಸಲ್ಲಿಕೆ ಮಾಡಿದ್ದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಪ್ರಕಾಶ್ ಜೊತೆಗಿದ್ದರು.
ರಾಜಕೀಯ ಬದ್ಧ ವೈರಿಗಳ ಮುಖಾಮುಖಿ: ಸ್ಮೈಲ್ ಮೂವಿಂಗ್
ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ಆರ್ ಆರ್ ನಗರದ ಬಿಬಿಎಂಪಿ ಕಚೇರಿಯಲ್ಲಿ ಮುಖಾಮುಖಿಯಾದರು. ಮೈತ್ರಿ ಸರ್ಕಾರದ ಪತನದ ಬಳಿಕ ಮೊದಲ ಬಾರಿಗೆ ಈ ಇಬ್ಬರೂ ನಾಯಕರು ಮುಖಾಮುಖಿಯಾದರು. ಈ ವೇಳೆ ಮಾತಿಲ್ಲ ಆದರೆ ಕಥೆಯಂತು ಇದೆ. ಅದೇನಪ್ಪ ಅಂದ್ರೆ ಇಬ್ಬರು ನಾಯಕರು ಮುಗುಳ್ನಕ್ಕು ಮೆಲ್ಲಮೆಲ್ಲನೇ ಹೆಜ್ಜೆ ಹಾಕಿದ್ದು.