ಪುಣೆ: ಕಾರು ಚಾಲನೆಯಲ್ಲಿದ್ದಾಗ ಉಂಟಾದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಮಹಾರಾಷ್ಟ್ರದ ನಾಸಿಕ್‌ನ ಎನ್‌ಸಿಪಿ ಮುಖಂಡ ಸಜೀವ ದಹನಗೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ.
ಎನ್‌ಸಿಪಿ ಮುಖಂಡ ಸಂಜಯ್ ಶಿಂಧೆ ಬೆಂಕಿಗೆ ಸಿಲುಕಿ ಮೃತಪಟ್ಟವರು. ಮುಂಬೈ-ಆಗ್ರಾ ಹೆದ್ದಾರಿಯ ಪಿಂಪಲ್‌ಗ್ವಾನ್ ಬಸ್ವಂತ್ ಟೋಲ್ ಪ್ಲಾಜಾ ಸಮೀಪ ತಮ್ಮ ಕಾರ್‌ನಲ್ಲಿ ಮಂಗಳವಾರ ಸಂಜೆ ಪ್ರಯಾಣಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಕಾರ್‌ನ ವೈರಿಂಗ್‌ನಲ್ಲಾದ ದೋಷದಿಂದ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಉಂಟಾದ ಬೆಂಕಿ ಕಿಡಿ ದೊಡ್ಡ ಜ್ವಾಲೆಯನ್ನೇ ಸೃಷ್ಟಿಸಿದೆ. ಕಾರ್‌ನಲ್ಲಿ ಇರಿಸಿದ್ದ ಹ್ಯಾಂಡ್ ಸ್ಯಾನಿಟೈಸರ್‌ನಿಂದ ಬೆಂಕಿ ಇನ್ನಷ್ಟು ವೇಗವಾಗಿ ಹಬ್ಬಿದೆ.
ಬೆಂಕಿ ಜೋರಾದಂತೆ ಕಾರ್‌ನ ಸೆಂಟ್ರಲ್ ಲಾಕ್‌ನಿಂದ ಎಲ್ಲ ಬಾಗಿಲುಗಳೂ ಜಾಮ್ ಆಗಿವೆ. ಒಳಗಿನಿಂದ ಬಾಗಿಲು ತೆರೆಯಲಾಗದೆ ಅಲ್ಲೇ ಸಿಕ್ಕಿಕೊಂಡ ಶಿಂಧೆ, ಕಿಟಕಿ ಒಡೆದು ಪಾರಾಗಲು ಪ್ರಯತ್ನಿಸಿದ್ದಾರೆ. ಆದರೆ ಆಗಲೇ ತೀವ್ರಗೊಂಡಿದ್ದ ಬೆಂಕಿ ಅವರನ್ನು ಸಜೀವವಾಗಿ ದಹಿಸಿದೆ.
ಕಾರ್‌ಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಸ್ಥಳೀಯರು ಬೆಂಕಿ ನಂದಿಸಿ ಶಿಂಧೆ ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಅಗ್ನಿಶಾಮಕ ದಳಕ್ಕೂ ಕರೆ ಮಾಡಿದ್ದಾರೆ. ಆದರೆ ಶಿಂಧೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ.
ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ ಬಳಿಕವೇ ಅದರಲ್ಲಿ ಇದ್ದ ವ್ಯಕ್ತಿ ಸಂಜಯ್ ಶಿಂಧೆ ಎನ್ನುವುದು ಗೊತ್ತಾಗಿದೆ. ಶಿಂಧೆ ಅವರು ನಾಸಿಕ್‌ನಲ್ಲಿ ದ್ರಾಕ್ಷಿ ಹಣ್ಣು ರಫ್ತುದಾರರಾಗಿದ್ದಾರೆ. ನಾಸಿಕ್ ವೈನ್ ಉದ್ಯಮಕ್ಕೆ ಹೆಸರುವಾಸಿ. ತಮ್ಮ ದ್ರಾಕ್ಷಿ ತೋಟಕ್ಕೆ ಕೀಟನಾಶಕ ತರಲು ಪಿಂಪಲ್‌ಗ್ವಾನ್‌ಗೆ ತೆರಳುತ್ತಿದ್ದರು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.