ಮೈಸೂರು: ಕೋವಿಡ್-19 ಹಿನ್ನೆಲೆ ಸಂಕಷ್ಟದಲ್ಲಿ ಸಿಲುಕಿರುವ ಕಟ್ಟಡ ಕಾರ್ಮಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಉಚಿತವಾಗಿ ಬಸ್‍ಪಾಸ್ ನೀಡಲಾಗುವುದು ಎಂದು ಶಾಸಕ ಹಾಗೂ ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷ ಎಂ. ಚಂದ್ರಪ್ಪ ಹೇಳಿದರು.
ಮೈಸೂರು ಗ್ರಾಮಾಂತರ ವಿಭಾಗದ ಸಭಾಂಗಣದಲ್ಲಿ ನಡೆದ ಕೋವಿಡ್-19 ತೆರವಿನ ನಂತರ ಕಾರ್ಯಾಚರಣೆಯ ಪರಿಶೀಲನೆ ಕುರಿತಂತೆ ಮಾತನಾಡಿದರು.
ಮೈಸೂರು ನಗರ ಮತ್ತು ಗ್ರಾಮಾಂತರ ವಿಭಾಗದಲ್ಲಿ ಪ್ರತಿದಿನ 66,611 ಕಟ್ಟಡ ಕಾರ್ಮಿಕರು ಮತ್ತು ಕೂಲಿ ಕಾರ್ಮಿಕರು ನಮ್ಮ ಸಂಸ್ಥೆಯ ಬಸ್‍ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಅವರಿಗೆ ಕೋವಿಡ್ ಸಂದರ್ಭದಲ್ಲಿ ಹಣ ಕೊಟ್ಟು ಓಡಾಡುವ ಶಕ್ತಿ ಇಲ್ಲ. ಆದ್ದರಿಂದ ಅವರಿಗೆ ಉಚಿತವಾಗಿ ಕಾರ್ಮಿಕ ಇಲಾಖೆ ವತಿಯಿಂದ ಪಾಸ್ ಕೊಡಿಸುವಂತಹ ಯೋಜನೆಯನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸೇವಾಮನೋಭಾವ ಹೊಂದಿರುವಂಥ ಹೆಸರುವಾಸಿಯಾದ ಸಂಸ್ಥೆಯಾಗಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಬಹಳಷ್ಟು ಉತ್ತಮವಾದ ಕೆಲಸವನ್ನು ಮಾಡಿ ಪ್ರತಿಷ್ಠಿತ ಕಂಪನಿಗಳಿಂದ ಮತ್ತು ಭಾರತ ಸರ್ಕಾರದಿಂದ ಪ್ರಶಸ್ತಿಗಳನ್ನು ಪಡೆದಿದೆ ಎಂದರು.
ನಮ್ಮ ಸಂಸ್ಥೆ ನಷ್ಟದಲ್ಲಿ ನಡೆದರು ಕೂಡ ಸಾರ್ವಜನಿಕರ ಮೇಲೆ ಯಾವುದೇ ರೀತಿ ತೆರಿಗೆಯನ್ನು ವಿಧಿಸದೆ ಕಾರ್ಯ ನಿರ್ವಹಿಸುತ್ತಿದೆ. ಈ ವರ್ಷ ಕೋವಿಡ್-19 ಹಿನ್ನೆಲೆಯಲ್ಲಿ ನಮ್ಮ ಸಂಸ್ಥೆ 1600 ಕೋಟಿ ರೂ. ನಷ್ಟವನ್ನು ಅನುಭವಿಸಿದೆ. ಸರ್ಕಾರ 1385 ಕೋಟಿ ರೂ. ಹಣವನ್ನು 5 ತಿಂಗಳ ಸಂಬಳವನ್ನಾಗಿ ನೀಡಿದೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರದ ಸಂಸ್ಥೆಯಾದ ನಗರ ಭೂ ಸಾರಿಗೆ ನಿರ್ದೇಶನಾಲಯ ವತಿಯಿಂದ ಮೈಸೂರು ವಿಭಾಗಕ್ಕೆ 50 ಬಸ್‍ಗಳನ್ನು ಉಚಿತವಾಗಿ ನೀಡುತ್ತಿದ್ದಾರೆ ಎಂದು ತಿಳಿಸಿದರು.