ನ್ಯೂಡೆಲ್ಲಿ: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಳೆದ ಏಳು ತಿಂಗಳಿನಿಂದ ಬಂದ್ ಆಗಿದ್ದ ಚಿತ್ರಮಂದಿರಗಳು ಅಕ್ಟೋಬರ್ 15ರ ನಂತರ ಚಲನಚಿತ್ರಗಳ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಹಾಗೆಯೇ ಮಾರ್ಗಸೂಚಿಯನ್ನು ಕೂಡ ಪ್ರಕಟಿಸಿದೆ. ಪ್ರಮುಖವಾಗಿ ಏಕ ಪರದೆ ಹಾಗೂ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಗೆ ಬೇರೆ ಬೇರೆ ಮಾರ್ಗಸೂಚಿಯನ್ನು ಅಳವಡಿಸಿಕೊಳ್ಳಬೇಕೆಂದು ಸ್ಪಷ್ಟಪಡಿಸಲಾಗಿದೆ.
ಆರು ಅಡಿ ಸಾಮಾಜಿಕ ಅಂತರ, ಮುಖಗವಸು ಬಳಕೆ, ಪ್ರವೇಶ ಮತ್ತು ನಿರ್ಗಮನ ಸ್ಥಳದಲ್ಲಿ ಸ್ಯಾನಿಟೈಸರ್, ಪ್ರದರ್ಶನಗಳ ನಡುವೆ ಸಾಕಷ್ಟು ಸಮಯದ ಅಂತರ, ಎಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ -ಪ್ರೇಕ್ಷಕರು ಸಾಲಾಗಿ ಬರಲು, ಹೋಗಲು ವ್ಯವಸ್ಥೆ, ಲಿಫ್ಟ್ ಬಳಕೆಗೆ ಮಿತಿ -ಮಧ್ಯಂತರ ಅವಧಿಯ ವಿಸ್ತರಣೆ ಮಾಡಬೇಕು.
ಜತೆಗೆ ಮುಂಗಡ ಟಿಕೆಟ್ ಖರೀದಿಗೆ ಒತ್ತು ನೀಡಬೇಕು, ಚಿತ್ರಮಂದಿರದ ಶೇ.50ರಷ್ಟು ಆಸನಗಳನ್ನು ಮಾತ್ರ ಭರ್ತಿ ಮಾಡಬೇಕು. ಎರಡು ಆಸನಗಳ ಮಧ್ಯೆ ಒಂದು ಖಾಲಿ ಆಸನದಲ್ಲಿ ಯಾರೂ ಕೂರದಂತೆ ಟೇಪ್ ಹಾಕಿ ಸೂಚಿಸಬೇಕು.
ಮಲ್ಟಿಪ್ಲೆಕ್ಸ್‌ನಲ್ಲಿ ಒಂದು ಸ್ಕ್ರೀನ್‌ನಲ್ಲಿನ ಸಿನಿಮಾದ ಆರಂಭದ ಅವಧಿ, ಮಧ್ಯಂತರ ಅವಧಿ ಮತ್ತು ಮುಕ್ತಾಯದ ಅವಧಿ ತಾಳೆ ಒಂದೇ ಇರಬಾರದು. ಸಂಪರ್ಕರಹಿತ ವಹಿವಾಟಿಗೆ ಆದ್ಯತೆ ನೀಡಬೇಕು ಎಸಿಯನ್ನು 24 ಡಿಗ್ರಿಯಿಂದ 30 ಡಿಗ್ರಿ ವರೆಗೆ ಸೆಟ್ ಮಾಡಬೇಕು. ಪ್ಯಾಕ್ ಮಾಡಿದ ಆಹಾರ, ಪಾನೀಯಕ್ಕೆ ಮಾತ್ರ ಅವಕಾಶ ನೀಡಲಾಗಿದೆ.