ಬೆಳಗಾವಿ: ಮಹಾರಾಷ್ಟ್ರದಲ್ಲಿ ಎಡೆಬಿಡದೆ ಬೀಳುತ್ತಿರುವ ಮಹಾಮಳೆಯಿಂದ ಮುಂಬೈ ಕರ್ನಾಟಕದಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.
ಗಡಿ ಜಿಲ್ಲೆಯ ಬಹುತೇಕ ನದಿಗಳು ತುಂಬಿ ಹರಿಯತ್ತಿದ್ದು ಹಲವೆಡೆ ಭಾರಿ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಬೆಳಗಾವಿ ನಗರ, ಸವದತ್ತಿ, ಬೈಲಹೊಂಗಲ, ಗೋಕಾಕ್, ಕಿತ್ತೂರು ಹಾಗೂ ಖಾನಾಪೂರ ತಾಲೂಕಿನಲ್ಲೂ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ಹಲವೆಡೆ ಮನೆಗಳು ಕುಸಿದಿವೆ.
ಕಳೆದ ರಾತ್ರಿಯಿಂದ ಮತ್ತೆ ನಿರಂತರವಾಗಿ ಸುರಿಯುತ್ತಿರುವದರಿಂದ ಹಳ್ಳ-ಕೊಳ್ಳಗಳು ತುಂಬಿದ್ದು, ಮಳೆನೀರು ಸೇತುವೆ ಮೇಲೆ ಹರಿಯುತ್ತಿರುವುದರಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಸವದತ್ತಿ ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಸೋಗಲ ಸೋಮೇಶ್ಚರ ಮಂದಿರದ ಜಲಧಾರೆಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಕೆಲಕಾಲ ಯಾತ್ರಾರ್ಥಿಗಳಿಗೆ ಜಲದಿಗ್ಭಂಧನವಾಗಿತ್ತು.
ಈ ವೇಳೆ ಸ್ಥಳೀಯರು ಹಗ್ಗಗಳನ್ನು ಬಿಟ್ಟು ಪ್ರವಾಸಿಗರನ್ನು ರಕ್ಷಣೆ ಮಾಡಿದ್ದಾರೆ. ಒಂದೆಡೆ ಸುರಿಯುತ್ತಿರುವ ಮಳೆ ಇನ್ನೊಂದೆಡೆ ಕಟಾವಿಗೆ ಬಂದ ಫಸಲು ಕಣ್ಮುಂದೆ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ನೋಡಿ ರೈತರು ಮಮ್ಮಲ ಮರುಗುತ್ತಿದ್ದಾರೆ. ಇನ್ನು ಸರ್ಕಾರ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನೆರವಿಗೆ ಬರಬೇಕು ಎಂದು ನೊಂದ ರೈತರು ಒತ್ತಾಯ ಮಾಡುತ್ತಿದ್ದಾರೆ.