ಕೊಪ್ಪಳ: ರಾಕಿಂಗ್ ಸ್ಟಾರ್ ಯಶ್ ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ್ದ ತಲ್ಲೂರು ಕೆರೆ ಯಾರೋ ಮಾಡಿದ ಎಡವಟ್ಟಿಗೆ ಇಂದು ಬರಿದಾಗಿ ಭಣಗುತ್ತಿದೆ.
ಹೌದು! ಪ್ರತಿವರ್ಷ ತುಂಬಿ ತುಳುಕುತ್ತಿದ್ದ ಕೆರೆ ಈ ಬಾರಿ ಭಣ ಭಣ ಅಂತಿದೆ. ಕೊಪ್ಪಳ ಜಿಲ್ಲೆಯಲ್ಲಿ ಈ ಬಾರಿ ಸುರಿದ ಭಾರಿ ಮಳೆಗೆ ಕೆರೆಕಟ್ಟೆ, ಹಳ್ಳ-ಕೊಳ್ಳಗಳೆಲ್ಲ ಭರ್ತಿಯಾಗಿವೆ. ಆದರೆ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆ ಮಾತ್ರ ನೀರಿಲ್ಲದೆ ಬರಿದಾಗಿದೆ.
ತಲ್ಲೂರು ಕೆರೆಯನ್ನು ನಟ ಯಶ್ ಅಭಿವೃದ್ಧಿ ಪಡಿಸಿದ್ದರು. ಹೀಗಾಗಿ ಕೊಪ್ಪಳ ಜಿಲ್ಲೆಯಲ್ಲಿ ಯಶ್ ಕೆರೆಯಂತಲೇ ಪ್ರಸಿದ್ಧಿ ಪಡೆದಿದೆ ಈ ಕೆರೆ. ಅಭಿವೃದ್ಧಿ ಪಡಿಸಿದಾಗಿನಿಂದಲೂ ತುಂಬಿ ತುಳುಕುತ್ತಿದ್ದ ಕೆರೆ ಈ ಬಾರಿ ಜಿಲ್ಲೆಯ ಎಲ್ಲಾ ಕೆರೆ ತುಂಬಿದರೂ ಬರಿದಾಗಿದೆ.
ಈ ಕೆರೆ ಬರಿದಾಗಲು ರೈಲ್ವೆಯ ಅವೈಜ್ಞಾನಿಕ ಕಾಮಗಾರಿ ಕಾರಣವಾಗಿದೆ. ಗದಗ-ವಾಡಿ ರೈಲ್ವೆಯ ಕಾಮಗಾರಿ ಕೈಗೆತ್ತಿಕೊಂಡಿದ್ದು, ಅದು ಅವೈಜ್ಞಾನಿಕವಾಗಿರುವುದರಿಂದ ಕೆರೆಗೆ ಬರುತ್ತಿದ್ದ ನೀರಿನ ಮೂಲಕ್ಕೆ ಧಕ್ಕೆ ಆಗಿದೆ. ಇದರಿಂದ ಇಂದು ಕೆರೆಯಲ್ಲಿ ನೀರಿಲ್ಲ. ಕೆರೆಗೆ ನೀರು ಹರಿದು ಬರುವ ಮಾರ್ಗವನ್ನು ರೈಲ್ವೆ ಕಾಮಗಾರಿ ನುಂಗಿಯಾಕಿದೆ. ಇದರಿಂದ ಇಂದು ಕೆರೆ ಭಣಗುಡುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.