ಬೆಂಗಳೂರು: ಪ್ರವಾಹ ಹಾಗೂ ರಾಜ್ಯಗಳಲ್ಲಿ ಎದುರಾದ ಸಂಕಷ್ಟ ಮತ್ತು ನಷ್ಟಗಳ ಕುರಿತು ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರ್ನಾಟಕವನ್ನು ಮಾತ್ರ ನಿರ್ಲಕ್ಷಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜ್ಞಾನಭಾರತಿ ವಾರ್ಡ್ನಲ್ಲಿ ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ತಮ್ಮ ಪಕ್ಷದ ಸರ್ಕಾರ ರಾಜ್ಯದಲ್ಲಿದೆ ಆದರೂ ಪ್ರವಾಹದಿಂದ ತತ್ತರಿಸಿರುವ ಜನರ ಸಂಕಷ್ಟಕ್ಕೆ ಪ್ರಧಾನಮಂತ್ರಿ ಮೋದಿ ದಾವಿಸದಿರುವುದು ತುಂಬ ನೋವಿನ ಸಂಗತಿ. ಅತಿವೃಷ್ಟಿಯಿಂದ ಕಂಗಾಲಾಗಿರುವ ಜನರ ಸಮಸ್ಯೆಗೆ ಸ್ಪಂದಿಸದೆ ಇರುವ ಇವರು ನಿಜವಾದ ಜನನಾಯಕರ ಎಂದು ಪ್ರಧಾನಿ ವಿರುದ್ಧ ಕಿಡಿಕಾರಿದರು.
ಪ್ರವಾಹ ವಿಚಾರದಲ್ಲಿ ಪ್ರಧಾನಿ ಮೋದಿ ರಾಜ್ಯವನ್ನು ನಿರ್ಲಕ್ಷಿಸುತ್ತಿದ್ದಾರೆ. ಇದು ರಾಜ್ಯದ ಜನತೆಗೆ ಅವರು ಮಾಡುತ್ತಿರುವ ಅವಮಾನ. ಜನರ ಸಮಸ್ಯೆಗಳಿಗೆ ಹೆಚ್ಚು ಗಮನಕೊಡದ ಕಂದಾಯ ಸಚಿವ ಆರ್.ಅಶೋಕ್ ಪ್ರವಾಹಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಅದು ಕಾಟಾಚಾರದ ಭೇಟಿ. ಅಲ್ಲಿಗೆ ಹೋದ ಅವರು ಕೇವಲ 10 ನಿಮಿಷದಲ್ಲೇ ವಾಪಸ್ ಆಗಿದ್ದಾರೆ. ಇದು ಬಿಜೆಪಿ ಸಚಿವರು ಕಷ್ಟದಲ್ಲಿರುವ ನಾಡಿನ ಜನರಿಗೆ ಸ್ಪಂದಿಸುವ ರೀತಿ ಎಂದು ಅಸಮಾಧಾನ ಹೊರಹಾಕಿದರು.
ಇನ್ನಾದರೂ ಪ್ರವಾಹ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಪ್ರಧಾನಿ ಮೋದಿಯವರಿಗೆ ಮತ್ತೊಮ್ಮೆ ಪತ್ರ ಬರೆಯಬೇಕು. ರಾಜ್ಯದಿಂದ ಒಟ್ಟು 25 ಸಂಸದರಿದ್ದಾರೆ. ಆದರೂ ಕೇಂದ್ರ ಸರ್ಕಾರ, ಮೋದಿಯವರು ರಾಜ್ಯವನ್ನು ಪರಿಗಣಿಸುತ್ತಿರುವ ಪರಿಯನ್ನು ನೋಡಿದರೆ, ನಮ್ಮ ರಾಜ್ಯ ಸಂದಸರು ತಾವು ಜನರಿಗೆ ಏನನ್ನು ಮಾಡುತ್ತಿದ್ದಾರೆಂಬುದರ ಕುರಿತು ತಮ್ಮನ್ನು ತಾವೇ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದ್ದಾರೆ.
ಪ್ರವಾಹದಿಂದ ತತ್ತರಿಸಿರುವ ಜನರು ಒಪ್ಪೊತ್ತಿನ ಕೂಳಿಗಾಗಿ ಪರದಾಡುತ್ತಿದ್ದಾರೆ. ಕೊರೊನಾ ಸೋಂಕಿನ ಈ ಸಂದರ್ಭದಲ್ಲಿ ಮನೆ, ಶೇಖರಿಸಿಟ್ಟಿದ್ದ ಆಹಾರ ವಸ್ತುಗಳು, ಪಾತ್ರೆ ಕಗಡೆ ಎಲ್ಲವನ್ನು ಕಳೆದುಕೊಂಡು ಬೀದಿಗೆ ಬಿದ್ದಿರುವ ಜನರ ಸಮಸ್ಯೆಗೆ ಇನ್ನಾದರೂ ಸರ್ಕಾರ ಸೂಕ್ತ ಕ್ರಮ ತೆಗೆದುಕೊಂಡು ಅವರ ಜೀವ ಮತ್ತು ಜೀವನಕ್ಕೆ ಆಸರೆಯಾಗಬೇಕು ಎಂದು ಆಗ್ರಹಿಸಿದ್ದಾರೆ.