ರಾಮನಗರ: ಮುಂದಿನ ಎರಡು ತಿಂಗಳು ಅಂದರೆ ನವೆಂಬರ್, ಡಿಸೆಂಬರ್ ನಂತರ ಬಹುಶಃ ರಾಜ್ಯ ರಾಜಕಾರಣದಲ್ಲಿ ಬಹಳ ಬದಲಾವಣೆ ಮುನ್ಸೂಚನೆ ಗೋಚರಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಭವಿಷ್ಯ ನುಡಿದರು.
ನಾನು ಕಾಂಗ್ರೆಸ್ ಜತೆ ಸರ್ಕಾರ ಮಾಡಿ ತಪ್ಪು ಮಾಡಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿದ್ದು ನನ್ನದೇ ತಪ್ಪಾಗಿದೆ ಎಂದು ಶನಿವಾರ ಸಂಜೆ ತಮ್ಮ ಬಿಡದಿಯ ತೋಟದ ಮನೆಯಲ್ಲಿ ಕರೆದಿದ್ದ ಶಿಕ್ಷಕರ ಸಭೆಯಲ್ಲಿ ಕುಮಾರಸ್ವಾಮಿ ತಿಳಿಸಿದರು.
ಕಾಂಗ್ರೆಸ್ ಜತೆ ಮೈತ್ರಿ ಎಂದರೆ ಮುಳ್ಳಿನ ಮೇಲೆ ಹಾಕಿದ ಬಟ್ಟೆಯಂತಾಗಿತ್ತು. ಈಗ ಅದರ ತಪ್ಪು ಅರಿವಾಗಿದ್ದು, ಮತ್ತೆ ಅಂಥ ತಪ್ಪು ಮರುಕಳಿಸದಂತೆ ಮುಂದಿನ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲೂ ನಮ್ಮ ಪಕ್ಷ ಅಭ್ಯರ್ಥಿಗಳನ್ನು ನಿಲ್ಲಿಸುವ ನಿಟ್ಟಿನಲ್ಲಿ ಶ್ರಮಿಸೋಣ ಎಂದು ಹೇಳಿದರು.
ಇನ್ನು ಮೈತ್ರಿವೇಳೆ ಆಗಿರುವ ತಪ್ಪನ್ನು ನಾನೇ ಸರಿ ಮಾಡುತ್ತೇನೆ. ಹೀಗಾಗಿ ಕಾರ್ಯಕರ್ತರು ಎದೆಗುಂದಬಾರದು ಎಂದು ಎಚ್.ಡಿ ಕುಮಾರಸ್ವಾಮಿ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನನ್ನ ಹಳೆಯ ಸ್ನೇಹಿತರು ನನ್ನ ಬಗ್ಗೆ ತುಚ್ಛವಾಗಿ ಮಾತನಾಡುತ್ತಾರೆ, ಅವರ ಬಗ್ಗೆ ನಾನು ಲಘುವಾಗಿ ಮಾತನಾಡುವುದಿಲ್ಲ. ನಾನೇನು ಅವರಿಗೆ ಅನ್ಯಾಯ ಮಾಡಿದ್ದೇನೆ ಎಂಬುದು ನನಗೆ ಗೊತ್ತಿಲ್ಲ. ನನ್ನಿಂದ ಬೆಳೆದವರೇ ನನಗೆ ಮೋಸ ಮಾಡಿ ಚೂರಿ ಹಾಕಿ ಹೋಗಿದ್ದಾರೆ. ಇಲ್ಲಿ ನನ್ನದೇ ತಪ್ಪು ಇದೆ. ನಾನು ಉತ್ತಮರ ಸಹವಾಸ ಮಾಡಿದ್ದರೆ ಇಂದು ನನಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಈ ತಪ್ಪನ್ನು ಮತ್ತೆ ಮಾಡುವುದಿಲ್ಲ ಎಂದು ಕಾರ್ಯಕರ್ತರಿಗೆ ಅಭಯ ನೀಡಿದರು.