ಬೆಂಗಳೂರು: ಕರ್ನಾಟಕ SSLC (10ನೇ ತರಗತಿ) ಫಲಿತಾಂಶವನ್ನು ಇಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಪ್ರಕಟಿಸಲಾಗಿದೆ. ಈ ಬಾರಿ ಒಟ್ಟು 7.75 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿದ್ದು, 7.7 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ರಾಜ್ಯದ ಒಟ್ಟು ಪಾಸ್ ಪ್ರಮಾಣವು ಸುಮಾರು 94.1% ಆಗಿದ್ದು, ಹುಡುಗಿಯರು ಹುಡುಗರಿಗಿಂತ ಉತ್ತಮ ಸಾಧನೆ ತೋರಿದ್ದಾರೆ.

ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಅತ್ಯುತ್ತಮ ಸಾಧನೆ ತೋರಿದ್ದು, ಕಲಬುರಗಿ ಜಿಲ್ಲೆ ಕಡಿಮೆ ಪಾಸ್ ಪ್ರಮಾಣ ದಾಖಲಿಸಿದೆ. ಬೆಂಗಳೂರು ನಗರ ಹಾಗೂ ಮೈಸೂರು ಜಿಲ್ಲೆಗಳು ರಾಜ್ಯ ಸರಾಸರಿಗಿಂತ ಉತ್ತಮ ಸಾಧನೆ ತೋರಿವೆ. 7 ವಿದ್ಯಾರ್ಥಿಗಳು 625/625 ಅಂಕಗಳನ್ನು ಪಡೆದು ರಾಜ್ಯ ಮಟ್ಟದ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ.
ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಪ್ರಥಮ ಸ್ಥಾನ, ಉಡುಪಿ ದ್ವಿತೀಯ ಸ್ಥಾನ ಹಾಗೂ ಉತ್ತರ ಕನ್ನಡ 3ನೇ ಸ್ಥಾನ ಪಡೆದುಕೊಂಡಿದೆ. ಕಲಬುರಗಿ ಕೊನೆಯ ಸ್ಥಾನದಲ್ಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇನ್ನು ಈ ಬಾರಿ ಪರೀಕ್ಷೆ ಬರೆದ ಶೇಕಡಾ 94.1 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 7.75 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದು, 5 ಸಾವಿರ ವಿದ್ಯಾರ್ಥಿಗಳು ಗೈರಾಗಿದ್ದರು. 7.7 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಶೇಕಡಾ 80 ರಷ್ಟು ಫಲಿತಾಂಶ ಬಂದಿದ್ದು, ಈ ಬಾರಿ ಶೇಕಡಾ 14 ರಷ್ಟು ಹೆಚ್ಚಳವಾಗಿರುವುದು ದೊಡ್ಡ ಸಾಧನೆಯಾಗಿದೆ ಎಂದು ಸಚಿವರು ತಿಳಿಸಿದರು.
ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ವಾಟ್ಸ್‌ಆ್ಯಪ್/ ಎಸ್‌ಎಂಎಸ್ ಮೂಲಕವೂ ಫಲಿತಾಂಶದ ಮಾಹಿತಿಯನ್ನು ರವಾನಿಸಲಾಗಿದೆ. ಜತೆಗೆ ಫಲಿತಾಂಶ ಪಟ್ಟಿಯು ಶಾಲೆಗಳಲ್ಲಿ ಮಧ್ಯಾಹ್ನ 12 ಗಂಟೆಗೆ ಲಭ್ಯವಾಗಿದೆ. ಈ ವರ್ಷ ಪ್ರಥಮ ಬಾರಿಗೆ ವಿಶೇಷವಾಗಿ, ಫಲಿತಾಂಶದ ಅಂಕಪಟ್ಟಿಯನ್ನು ಡಿಜಿಲಾಕರ್ ಮೂಲಕ ನೀಡಲಾಗಿದೆ. ಅಲ್ಲಿಯೇ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಏಳು ವಿದ್ಯಾರ್ಥಿಗಳು 625 ಕ್ಕೆ 625 ಅಂಕ: ಈ ಬಾರಿ ಪರೀಕ್ಷೆಯಲ್ಲಿ ಏಳು ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಗಳಿಸಿದ್ದಾರೆ. ದಾವಣಗೆರೆಯ ಭರತ್, ರಾಯಚೂರಿನ ಸುಖದೇವ್, ಚಿಕ್ಕೋಡಿಯ ಪ್ರಾರ್ಥನಾ, ಚಿಕ್ಕಮಗಳೂರಿನ ಬೃಂದಾ, ಉಡುಪಿ ಪ್ರೀತಂ, ವಿಜಯಪುರದ ಸೌಜನ್ಯ, ಬೆಂಗಳೂರು ಉತ್ತರ ಧನುಷ್ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
SSLC: ಮೇ 18 ರಿಂದ 2ನೇ ಪರೀಕ್ಷೆ: ಎಸ್ಎಸ್ಎಲ್‌ಸಿ (SSLC) ಫಲಿತಾಂಶ ಪ್ರಕಟವಾದ ಬೆನ್ನಲ್ಲೇ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಫೇಲಾದವರಿಗೆ ಪರೀಕ್ಷಾ ಶುಲ್ಕ ಮನ್ನಾ: ಸಾಮಾನ್ಯವಾಗಿ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳು ಮುಂದಿನ ಪರೀಕ್ಷೆ ಬರೆಯಲು ಪ್ರತಿ ವಿಷಯಕ್ಕೆ 250 ರೂಪಾಯಿಶುಲ್ಕ ಪಾವತಿಸಬೇಕಿತ್ತು. ಆದರೆ, ಈ ಬಾರಿ ಫೇಲಾದ ವಿದ್ಯಾರ್ಥಿಗಳಿಂದ ಯಾವುದೇ ಪರೀಕ್ಷಾ ಶುಲ್ಕವನ್ನು ವಸೂಲಿ ಮಾಡದಿರಲು ಸರ್ಕಾರ ತೀರ್ಮಾನಿಸಿದೆ. ಈ ನಿರ್ಧಾರದಿಂದ ಬಡ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ.
ಮೇ 18 ರಿಂದ 2ನೇ ಪರೀಕ್ಷೆ: ಮೊದಲ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಅಥವಾ ಅಂಕಗಳನ್ನು ಸುಧಾರಿಸಿಕೊಳ್ಳಲು ಇಚ್ಛಿಸುವ ವಿದ್ಯಾರ್ಥಿಗಳಿಗಾಗಿ ‘ಎರಡನೇ ಪರೀಕ್ಷೆ’ಯ (Exam 2) ದಿನಾಂಕವನ್ನು ಪ್ರಕಟಿಸಲಾಗಿದೆ. ಮೇ 18 ರಿಂದ ಮೇ 25 ರವರೆಗೆ ಎಸ್‌ಎಸ್ಎಲ್‌ಸಿ ಎರಡನೇ ಪರೀಕ್ಷೆಗಳು ನಡೆಯಲಿವೆ. ವಿದ್ಯಾರ್ಥಿಗಳು ಧೃತಿಗೆಡದೆ ಈ ಪರೀಕ್ಷೆಗೆ ಸಿದ್ಧತೆ ನಡೆಸಲು ಸಚಿವರು ಕರೆ ನೀಡಿದ್ದಾರೆ.
ಮೂರನೇ ಪರೀಕ್ಷೆ ಇರುವುದಿಲ್ಲ: ಪಿಯುಸಿ (PUC) ಮಟ್ಟದಲ್ಲಿ ಮೂರು ಪರೀಕ್ಷೆಗಳನ್ನು ನಡೆಸುವ ಪದ್ಧತಿ ಜಾರಿಯಲ್ಲಿದ್ದರೂ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಈ ಬಾರಿ ಮೂರನೇ ಪರೀಕ್ಷೆ ಇರುವುದಿಲ್ಲಎಂದು ಸ್ಪಷ್ಟಪಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಕೇವಲ ಎರಡು ಪರೀಕ್ಷೆಗಳ ಅವಕಾಶ ಮಾತ್ರ ಲಭ್ಯವಿರಲಿದೆ.
Related










