ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆ ಮೇಲೆ ಕಣ್ಣಿಟ್ಟಿರುವ ಜೆಡಿಎಸ್ ತಳಮಟ್ಟದಲ್ಲಿ ಸಂಘಟನೆಗೆ ಮುಂದಾಗಿದ್ದು, ಗ್ರಾಪಂನಲ್ಲಿ ಈ ಹಿಂದಿನದಕ್ಕಿತ್ತಲೂ ಹೆಚ್ಚಿನ ಸೀಟುಗಳನ್ನು ಪಡೆಯಲು ಸೂಕ್ಷ್ಮವಾಗಿ ಕೆಲಸ ಆರಂಭಿಸಿದೆ.
2015 ರ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದರು. ಈ ವೇಳೆ ಬಿಜೆಪಿ ಮೂರನೇ ಸ್ಥಾನ ಪಡೆದುಕೊಂಡಿತ್ತು. ಇನ್ನು ಎರಡನೇ ಸ್ಥಾನ ಪಡೆದುಕೊಂಡಿದ್ದ ಜೆಡಿಎಸ್ ಈ ಬಾರಿ ಮೊದಲ ಸ್ಥಾನಕ್ಕೇರು ಪ್ರಯತ್ನದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸುವ ಹಾದಿಯಲ್ಲಿ ಮುನ್ನುಗ್ಗುತ್ತಿದೆ.
ಮೈತ್ರಿ ಸರ್ಕಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಮಾಡಿರುವ ಜನಸ್ನೇಹಿ ಕೆಲಸಗಳೇ ಈ ಬಾರಿ ಗ್ರಾಮಪಂಚಾಯಿತಿ ಮಟ್ಟದಲ್ಲಿ ಪಕ್ಷಕ್ಕೆ ಆನೆ ಬಲ ತಂದುಕೊಡಲಿದೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಗೊಳಿಸಲು ಜೆಡಿಎಸ್ ನಿರ್ಧರಿಸಿದೆ.
ಗ್ರಾಪಂ ಮಾತ್ರವಲ್ಲದೆ, ರಾಜ್ಯದಲ್ಲಿ ನಡೆಯುವ ಎಲ್ಲ ಚುನಾವಣೆಗಳಲ್ಲೂ ಬೂತ್ ಮಟ್ಟದಲ್ಲಿ ಸಕ್ರಿಯ ಕಾರ್ಯ ನಿರ್ವಹಿಸುವ ಸಲುವಾಗಿ “ಕಾರ್ಯಕರ್ತರ ಪಡೆ” ರಚನೆಕಾರ್ಯವನ್ನು ಸದ್ದಿಲ್ಲದೆ ಆರಂಭಿಸಿದೆ.
ಇನ್ನು ರಾಜ್ಯದಲ್ಲಿರುವ 6083 ಗ್ರಾಮ ಪಂಚಾಯತಿಗಳಲ್ಲಿ ಈ ಬಾರಿ ಶೇ,45 ರಷ್ಟು ಸೀಟು ಗೆಲ್ಲುವುದಕ್ಕೆ ಜೆಡಿಎಸ್ ಸಜ್ಜಾಗುತ್ತಿರುವುದಾಗಿ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಹೇಳಿದ್ದಾರೆ.
ನಾವು ಶೇ.70 ರಷ್ಟು ಸೀಟು ಗೆಲ್ಲುವ ಗುರಿ ಹೊಂದಿದ್ದೇವೆ, ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರ ಚಿಂತನೆಯಂತೆ ರಾಜ್ಯದಲ್ಲಿ “ಕಾರ್ಯಕರ್ತರ ಪಡೆ” ರಚನೆಗೆ ರೂಪುರೇಷೆ ರಚಿಸಲಾಗುತ್ತಿದೆ ಎಂದು ಹೇಳಿದ್ದಾರೆ.