ಮೈಸೂರು: ಉಪ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲಿದ್ದು, ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ನ್ಯೂಡೆಲ್ಲಿಯಿಂದ ಸಿಕ್ಕಿರುವ ಮಾಹಿತಿ ಆಧಾರದ ಮೇಲೆ ಹೇಳುತ್ತಿದ್ದೇನೆ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲಿದ್ದು, ಸಿಎಂ ಆಗಿ ಬಿಎಸ್‌ವೈ ಮುಂದುವರಿಯೋದಿಲ್ಲ. ‘ಐ ಆ್ಯಮ್ ವೆರಿ ಕಾನ್ಫಿಡೆಂಟ್’ ಯಡಿಯೂರಪ್ಪ ಬದಲಾಗುತ್ತಾರೆ ಎಂದು ಹೇಳಿದರು.
ಹಲವು ದಿನದಿಂದ ಸಿಎಂ ಬದಲಾವಣೆ ಮಾಡುವ ಚಿಂತನೆಯಲ್ಲಿ ಬಿಜೆಪಿ ಇದೆ. ನಾನು ಅವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದು, ಅದೂ ಒಂದು ಕಾರಣ ಇರಬಹುದು. ಹೀಗಾಗಿ ಉಪ ಚುನಾವಣೆ ಫಲಿತಾಂಶದ ನಂತರ ಯಡಿಯೂರಪ್ಪ ಸಿಎಂ ಕುರ್ಚಿ ಬಿಡುವುದು ಶತಸಿದ್ದ ಎಂದರು.
ಇನ್ನು ಶಿರಾದಲ್ಲಿ ಕಳೆದ ಬಾರಿ ಅಪಪ್ರಚಾರ ಆಗಿತ್ತು. ಆರ್.ಆರ್. ನಗರದಲ್ಲಿ ಕಳೆದ ಬಾರಿ ಕಾಂಗ್ರೆಸ್ ಗೆದ್ದಿತ್ತು. ಹಾಗಾಗಿ ಈಗ ನಡೆದಿರುವ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇದೆ. ಶಿರಾದಲ್ಲಿ ಜಯಚಂದ್ರ ಗೆಲಲಿದ್ದು, ಆರ್.ಆರ್. ನಗರದಲ್ಲಿ ಕುಸುಮಾ ಗೆಲ್ಲುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.