ಕೊಪ್ಪಳ: ಬಹಿರ್ದೆಸೆಗೆ ತೆರಳಿದ ಯುವಕನ ಮೇಳೆ ದಾಳಿ ಮಾಡಿದ ಚಿರತೆ ಆತನನ್ನು ಕಚ್ಚಿ ಕೊಂದುಹಾಕಿರುವ ಹೃದಯವಿದ್ರಾವಕ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ವ್ಯಾಪ್ತಿಯ ದುರ್ಗಾದೇವಿ ದೇವಸ್ಥಾನದ ಬಳಿ ಈ ಘಟನೆ ನಡೆದಿದ್ದು, ಹುಲಗೇಶ್ ಚಿರತೆಗೆ ಬಲಿಯಾದ ಯುವಕನಾಗಿದ್ದಾನೆ. ಮೃತ ಹುಲಗೇಶ್ ದುರ್ಗಾದೇವಿ ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ಅಡುಗೆ ಭಟ್ಟನಾಗಿದ್ದ. ಎಂದಿನಂತೆ ಬುಧವಾರ ಸಹ ದೇವಸ್ಥಾನದ ಕೆಲಸ ಕಾರ್ಯಗಳನ್ನು ಮುಗಿಸಿ ರಾತ್ರಿ ಬಹಿರ್ದೆಸೆಗೆ ಹೋಗಿದ್ದ. ಈ ವೇಳೆ ಚಿರತೆ ದಾಳಿ ಮಾಡಿ, ಎಳೆದುಕೊಂಡು ಹೋಗಿ ಇಡೀ ದೇಹವನ್ನು ತುಂಡು ತುಂಡು ಮಾಡಿದೆ.
ವಿಷಯ ತಿಳಿದ ಸ್ಥಳೀಯರು ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದು. ಸ್ವಲ್ಪಸ್ವಲ್ಪ ದೂರದಲ್ಲಿ ಬಿದ್ದಿದ್ದ ದೇಹದ ಅವಶೇಷಗಳನ್ನು ಒಟ್ಟುಗೂಡಿಸಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೆ ಮಗು ಮತ್ತು ವೃದ್ಧೆಯ ಮೇಲೆ ಚಿರತೆ ದಾಳಿ ಮಾಡಿತ್ತು. ಅದೃಷ್ಟವಶಾತ್ ಅವರು ಬದುಕುಳಿದಿದ್ದರು. ಈ ಘಟನೆ ಮಾಸುವ ಮುನ್ನವೆ ಈಗ ಯುವಕನನ್ನೆ ಬಲಿಪಡೆದಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಬೆಚ್ಚಿಬೀಳುವಂತೆ ಮಾಡಿದೆ.