ಬೆಂಗಳೂರು: ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದಿದೆ. ಇದೇ ವೇಳೆ ಪ್ರಕರಣದ ವಿಚಾರವಣೆಯನ್ನು ರಾಜಕೀಯ ಪ್ರಭಾವಕ್ಕೆ ಒಳಗಾಗದೇ ಸಿಬಿಐ ತನಿಖೆ ನಡೆಸಲಿ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಹಳೆಯ ಪ್ರಕರಣವನ್ನು ತನಿಖೆ ನಡೆಸಿ ಕ್ರಮಕೈಗೊಳ್ಳಲು ಮುಂದಾದರೇ ರಾಜಕೀಯ ನಾಯಕರಾದ ನಾವು ಅದನ್ನು ರಾಜಕೀಯ ಪ್ರೇರಿತ ಎಂದು ಹೇಳಿ ಶೆಲ್ಟರ್ ಪಡೆದುಕೊಳ್ಳಲು ಯತ್ನಿಸುತ್ತೇವೆ. ಇದೇನೆ ಇರಲಿ ಪ್ರಾಮಾಣಿಕವಾಗಿ ಸಿಬಿಐ ಅಧಿಕಾರಿಗಳು ತನಿಖೆ ನಡೆಸಿ ನೊಂದವರಿಗೆ ಸೂಕ್ತ ನ್ಯಾಯಕೊಡಿಸಬೇಕು ಎಂದರು.
ಯೋಗೇಶ್ ಗೌಡ ಪ್ರಕರಣದಲ್ಲಿ ಸಾರ್ವಜನಿಕವಾಗಿ ಹಲವಾರು ಗುಮಾನಿ ಇತ್ತು. ಬಿಜೆಪಿ ಸರ್ಕಾರ ಬಂದು ತನಿಖೆಗೆ ಕೊಟ್ಟಿತ್ತು. ಪ್ರಕರಣದಲ್ಲಿ ನಿಜವಾದ ಸತ್ಯಾಸತ್ಯತೆ ಹೊರ ಬರಬೇಕು. ಅಧಿಕಾರಿಗಳು ಪ್ರಾಮಾಣಿಕವಾಗಿ ರಾಜಕೀಯ ಪ್ರಭಾವಕ್ಕೆ ಒಳಗಾಗದೇ ತನಿಖೆ ಮಾಡಬೇಕು. ಆದರೆ ನನಗೆ ವಿನಯ್ ಕುಲಕರ್ಣಿ ಬಿಜೆಪಿಗೆ ಸೇರಲು ಹೊರಟಿದ್ರಾ ಎಂಬುವುದು ನನಗೆ ಗೊತ್ತಿಲ್ಲ. ಇದು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗೆ ಮಾತ್ರ ತಿಳಿದಿರುತ್ತದೆ ಎಂದರು.
ಶಿರಾದಲ್ಲಿ ನಾವೇ ಗೆಲ್ತೀವಿ
ಇದೇ ವೇಳೆ ಉಪಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಎಚ್ಡಿಕೆ, ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಚುನಾವಣೆಯಲ್ಲಿ ಗೆಲುವು ಪಡೆದಿದ್ದೇವೆ ಎಂದು ಹೇಳುತ್ತಿದ್ದಾರೆ. ಚುನಾವಣೆ ಫಲಿತಾಂಶದ ನಂತರ ಸಿಎಂ, ವಿಪಕ್ಷ ಸ್ಥಾನ ಬದಲಾಗುತ್ತೆ ಅಂತಾ ಚರ್ಚೆ ಆಗುತ್ತಿದೆ. ಸಿಎಂ ಪುತ್ರ 25 ಸಾವಿರ ಮತದಲ್ಲಿ ಗೆದ್ದಿದ್ದೇವೆ ಅಂತಾರೆ. ಇಬ್ಬರ ಮಾತು ಕೇಳಿದ್ರೆ ನಾವು ಮೂರನೇ ಸ್ಥಾನಕ್ಕೆ ಬರುತ್ತೀವಾ ಅನ್ನಿಸುತ್ತಿದೆ. ಆರ್ಆರ್ ನಗರದಲ್ಲಿ ನಮ್ಮ ಕಾರ್ಯಕರ್ತರು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿದ್ದು, ಗೆಲುವಿನ ಹತ್ತಿರಕ್ಕೆ ಹೋಗ್ತೀವಿ. ಇನ್ನು ಯಾರು ಏನೇ ಹೇಳಲಿ, ಏನೇ ಮಾಡಲಿ ಶಿರಾದಲ್ಲಿ ನಾವು ಗೆಲ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.