ಬೆಂಗಳೂರು: ಆರ್ ಆರ್ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಮತ್ತು ರಾಜೇಶ್‌ಗೌಡ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ನಿಂದ ಎರಡು ಬಾರಿ ಗೆಲುವು ಸಾಧಿಸಿದ್ದ ಮುನಿರತ್ನ ಅವರು ಈ ಬಾರಿ ಬಿಜೆಪಿ ಸೇರಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಇನ್ನು ಶಿರಾದಿಂದ ಇದೇ ಮೊದಲಬಾರಿಗೆ ನಿಂತು ರಾಜೇಶ್‌ಗೌಡ ಅವರು ಗೆಲುವು ಸಾಧಿಸಿದ್ದು, ಬಿಜೆಪಿ ಶಿರಾದಲ್ಲಿ ಮೊದಲ ಬಾರಿಗೆ ಖಾತೆ ತೆರೆದಿದೆ.
ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಮುನಿರತ್ನ ಅವರು ಅಂತಿಮವಾಗಿ 57,672 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಬಿಜಿಪಿಯ ಮುನಿರತ್ನ ಅವರು ಒಟ್ಟು 1,25,665 ಮತಗಳನ್ನು ಪಡೆದರೆ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು 67,993 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಇನ್ನು ಶಿರಾದಲ್ಲೂ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ರಾಜೇಶ್‌ಗೌಡ ಗೆಲುವನ್ನು ಮುಡಿಗೇರಿಸಿಕೊಳ್ಳುತ್ತಿದ್ದಾರೆ. ಈಗ 20 ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು ಇನ್ನೂ 4 ಸುತ್ತಗಳು ಮಾತ್ರ ಬಾಕಿ ಇದೆ.
ಆರ್ ಆರ್ ನಗರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ಅಬ್ಬರದ ಪ್ರಚಾರ, ಆರೋಪ– ಪ್ರತ್ಯಾರೋಪ, ಜಾತಿ– ಕಣ್ಣೀರ ರಾಜಕಾರಣದ ಕಾರಣದಿಂದ ರಾಜರಾಜೇಶ್ವರಿ ನಗರದ ಉಪ ಚುನಾವಣೆ ಭಾರಿ ಕುತೂಹಲ ಕೆರಳಿಸಿತ್ತು. ಅಲ್ಲದೆ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಮಧ್ಯೆ ಜಿದ್ದಾಜಿದ್ದಿನ ಪೈಪೋಟಿ ನಡೆಯಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಮತದಾರ ಬಿಜೆಪಿ ‘ಕೈ’ ಹಿಡಿದಿರುವುದು ಬಹುತೇಕ ಸ್ಪಷ್ಟವಾಗಿದೆ.