ಬನ್ನೂರು: ಬನ್ನೂರು ಪುರಸಭೆ ನೂತನ ಅಧ್ಯಕ್ಷರಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿದ ಭಾಗ್ಯಶ್ರೀ ಕೃಷ್ಣ ಇಂದು ಚಾಮನಹಳ್ಳಿಯ 21, 22 ಮತ್ತು 23ನೇ ವಾರ್ಡ್‌ಗಳಿಗೆ ಭೇಟಿ ನೀಡಿ ಕೆಲ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಿದ್ದಾರೆ.
ಈ ವೇಳೆ ವಾರ್ಡ್ ನಿವಾಸಿಗಳ ಅಹವಾಲು ಸ್ವೀಕರಿಸಿದ ಅವರು, ಮನೆಗಳಿಗೆ ಸರಿಯಾದ ರಸ್ತೆಗಳಿಲ್ಲದಿರುವುದು, ಮೋರಿ ನೀರು ಹೋಗಲು ವ್ಯವಸ್ಥೆ ಇಲ್ಲದಿರುವುದರ ಬಗ್ಗೆ ತಿಳಿದುಕೊಂಡು ಶೀಘ್ರದಲ್ಲೇ ಪರಿಹರಿಸುವ ಭರವಸೆ ನೀಡಿದರು.
ಇನ್ನು 23ನೇ ವಾರ್ಡ್‌ನಲ್ಲಿ ಬೀದಿ ದೀಪಗಳು ಹಾಳಾಗಿರುವುದನ್ನು ಕಂಡು ತಕ್ಷಣ ಸ್ಥಳದಲ್ಲೇ ಇದ್ದ ಪರಿಸರ ಅಧಿಕಾರಿಗೆ ವಿಷಯ ತಿಳಿಸಿ ಹೊಸ ಬೀದಿದೀಪಗಳನ್ನು ಹಾಕಿಸಿದರು.
22ನೇ ವಾರ್ಡ್‌ನಲ್ಲಿ ಸ್ವಚ್ಛತೆ ಕಾರ್ಯವನ್ನು ಪೌರಕಾರ್ಮಿಕರಿಂದ ಮಾಡಿಸಲಾಯಿತು. ಇನ್ನು 21ನೇ ವಾರ್ಡ್‌ನಲ್ಲಿ ನಿವಾಸಿಗಳಿಂದ ಸಮಸ್ಯೆ ಆಲಿಸಿದ ಅಧ್ಯಕ್ಷರು ಶೀಘ್ರದಲ್ಲೇ ಅಧಿಕಾರಿಗಳು ಮತ್ತು ಕೌನ್ಸಿಲರ್‌ಗಳ ಸಭೆ ಕರೆದು ಈ ಬಗ್ಗೆ ಚರ್ಚಿಸಿ ಯೋಜನೆ ಸಿದ್ಧಪಡಿಸಿಕೊಂಡು ಪರಿಹರಿಸುವುದಾಗಿ ತಿಳಿಸಿದರು.
ಒಟ್ಟಾರೆ 1998ರಲ್ಲಿ ಪುರಸಭೆಗೆ ಚಾಮನಹಳ್ಳಿಯನ್ನು ಸೇರಿಸುವಂತೆ ಅರ್ಜಿಕೊಟ್ಟಿದ್ದ ಹಿನ್ನೆಲೆಯಲ್ಲಿ ಈ ಹಿಂದೆ ಇದ್ದ ಅತ್ತಹಳ್ಳಿ ಗ್ರಾಮಪಂಚಾಯಿತಿಯಿಂದ ಹೊರಗುಳಿದಿತ್ತು. ನಂತರ ಪುರಸಭೆಗೂ ಸೇರದೆ ಅತಂತ್ರ ಸ್ಥಿತಿಯಲ್ಲಿದ್ದ ಗ್ರಾಮವನ್ನು ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಪುರಸಭೆಗೆ 2018ರಲ್ಲಿ ಅಧಿಕೃತವಾಗಿ ಸೇರಿಸಿ ಮೂರು ವಾರ್ಡ್‌ಗಳಾಗಿ ವಿಭಾಗಿಸಿ ಚುನಾವಣೆ ನಡೆದಿತ್ತು. ಆದರೆ ಅಂದಿನಿಂದ ಕೆಲ ಸಮಸ್ಯೆಯಿಂದ ಗೆದ್ದ ಸದಸ್ಯರಿಗೆ ಅಧಿಕಾರ ನಡೆಸಲು ಸಾಧ್ಯವಾಗಿರಲಿಲ್ಲ.
ಪ್ರಸ್ತುತ ಸಮಸ್ಯೆ ಬಗೆ ಹರಿದಿದ್ದು, ಅಧ್ಯಕ್ಷರ ಆಯ್ಕೆಯೂ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಪುರಸಭೆಯ ಎಲ್ಲಾ ವಾರ್ಡ್‌ಗಳು ಅಭಿವೃದ್ಧಿ ಹೊಂದಲಿವೆ ಎಂಬ ಭರವಸೆ ಇದೆ ಎಂದು ನಿವಾಸಿಗಳು ತಿಳಿಸಿದರು.
ವಾರ್ಡ್ ಭೇಟಿ ವೇಳೆ ಕೌನ್ಸಿಲರ್‌ಗಳಾದ ಸುರೇಶ್, ಚಲುವರಾಜು ಮತ್ತು ವಿಜಯ್ ಕುಮಾರ್, ಮುಖ್ಯಾಧಿಕಾರಿ ಪುಷ್ಪಲತಾ, ಪರಿಸರ ಅಧಿಕಾರಿ ನಜಿಮಾ ಮತ್ತಿತರರು ಇದ್ದರು.