ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನವಸತಿ ಪ್ರದೇಶದಲ್ಲಿ ಉದ್ದಿಮೆಗಳು ಕಾರ್ಯನಿರ್ವಹಿಸುತ್ತಿವೆ. ಇಂತಹ ಉದ್ದಿಮೆಗಳಿಂದ ಅಧಿಕಾರಿಗಳು ಕೋಟ್ಯಂತರ ರೂಪಾಯಿ ವಸೂಲಿ ಮಾಡುವ ಸಲುವಾಗಿ ಉದ್ದೇಶ ಪೂರ್ವಕವಾಗಿ ಉದ್ದಿಮೆ ಪರವಾನಗಿ ನೀಡುತ್ತಿಲ್ಲ. ಹೊಸಗುಡ್ಡದಹಳ್ಳಿ ಅವಘಡ ನಡೆಯಲು ಬಿಬಿಎಂಪಿಯೇ ನೇರ ಹೊಣೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯ ವಕ್ತಾರ ಶರತ್ ಖಾದ್ರಿ ಆರೋಪಿಸಿದ್ದಾರೆ.
ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಘೋರ ಬೆಂಕಿ ಅವಘಡದಿಂದ ನೂರಾರು ಕುಟುಂಬಗಳು ಬೀದಿಪಾಲಾಗಿವೆ. ಆದರೆ ಇದುವರೆಗೂ ಆ ಕುಟುಂಬಗಳಿಗೆ ಪುರ್ನವಸತಿ ಕಲ್ಪಿಸಿಲ್ಲ. ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ, ಕೆ.ಸುಧಾಕರ್, ಸ್ಥಳೀಯ ಶಾಸಕ ಕೃಷ್ಣಪ್ಪ ನಾಮ್ ಕೆ ವಾಸ್ತೆಗೆ ಬಂದು ಕೈ ಬೀಸಿ ಹೋಗಿದ್ದು ಬಿಟ್ಟರೆ ಜನರ ಕಷ್ಟ ಕೇಳಿಲ್ಲ ಇಂತಹ ನಾಲಾಯಕ್ ಜನ ನಾಯಕರಿಗೆ ನಾಚಿಕೆ ಆಗಬೇಕು, ಜನರನ್ನು ನಡುಬೀದಿಯಲ್ಲಿ ಮಲಗಿಸಿದ ಇವರಿಗೆ ಮಾನವೀಯತೆ ಇದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆನ್‌ಲೈನ್ ಮೂಲಕ ಉದ್ದಿಮೆ ಪರವಾನಗಿ ನೀಡಲಾಗುವುದು ಎಂದು ಮಾಧ್ಯಮಗಳ ಮುಂದೆ ಸುಳ್ಳು ಹೇಳಿದ್ದ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ತಮ್ಮ ಕೆಳಗಿನ ಅಧಿಕಾರಿಗಳನ್ನು ರಕ್ಷಿಸುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಹಾಳುಗೆಡವಿ, ಉದ್ದಿಮೆದಾರರನ್ನು ಕಚೇರಿಗೆ ಕರೆಸಿ ನವೀಕರಣದ ಹೆಸರಿನಲ್ಲಿ ಹಣ ಕೀಳಲಾಗುತ್ತಿದೆ. ಈ ಘೋರ ದುರಂತಕ್ಕೆ ಎಲ್ಲಾ ಮಾಜಿ ಮೇಯರ್‌ಗಳು, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು ಕಾರಣ ಎಂದರು.
ಬೆಂಗಳೂರಿನಲ್ಲಿ ಉದ್ದಿಮೆ ತೆರೆಯುವುದು ಇನ್ನು ಸುಲಭ ಎಂದು ಹೇಳಿದ್ದ ಬಿಬಿಎಂಪಿ ಹಿಂಬಾಗಿಲ ಮೂಲಕ ಉದ್ದಿಮೆದಾರರಿಂದ ಹಣ ದೋಚುತ್ತಿದ್ದು, ಜನವಸತಿ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಿದರೂ ಸರಿಯಾಗಿ ಪರಿಶೀಲಿಸದೆ ಜನಸಾಮಾನ್ಯರ ಜೀವದ ಜತೆ ಚೆಲ್ಲಾಟವಾಡುತ್ತಿದೆ. ಈ ಎಲ್ಲಾ ಅವಘಡಗಳ ಹಿಂದೆ ಬಿಬಿಎಂಪಿಯ ಸಾರ್ವಜನಿಕ ಆರೋಗ್ಯ ಅಧಿಕಾರಿಗಳ ವ್ಯಾಪಕ ಅವ್ಯವಹಾರ ಇದೆ. ಪರವಾನಗಿ ನೀಡುವುದೇ ದಂಧೆಯಾಗಿ ಮಾರ್ಪಟ್ಟಿದೆ ಎಂದು ದೂರಿದರು.
ಅಧಿಕೃತವಾಗಿ ಬಿಬಿಎಂಪಿಯಿಂದ ಪರವಾನಗಿ ಪಡೆದು ವ್ಯಾಪಾರ, ವಹಿವಾಟು ನಡೆಸುತ್ತಿರುವ ಉದ್ದಿಮೆಗಳಿಂತ ಅನಧಿಕೃತವಾಗಿ ನಡೆಯುತ್ತಿರುವ ಉದ್ದಿಮೆಗಳ ಸಂಖ್ಯೆ ದುಪ್ಪಟ್ಟಿವೆ ಅಂಕಿ ಅಂಶವನ್ನು ಕಳೆದ ಮಾರ್ಚ್ ತಿಂಗಳಲ್ಲಿ ಪಾಲಿಕೆ ಅಧಿಕಾರಿಗಳೇ ನಡೆಸಿದ ಸಮೀಕ್ಷೆಯಿಂದ ಇದು ಬಹಿರಂಗವಾಗಿದೆ.
198 ವಾರ್ಡ್‌ಗಳಲ್ಲಿ ಪರವಾನಗಿ ಪಡೆದು ಅಧಿಕೃತವಾಗಿ 50,383, ಅನಧಿಕೃತವಾಗಿ 59,130 ಉದ್ದಿಮೆಗಳು ನಡೆಯುತ್ತಿವೆ ಎಂದು ಆರೋಗ್ಯ ಅಧಿಕಾರಿಗಳು ವರದಿ ಸಲ್ಲಿಸಿದ್ದರು. ಈ ಸಮೀಕ್ಷೆ ಸಾಕಷ್ಟು ಅನುಮಾನ ಮೂಡಿಸಿದ ಕಾರಣ ಮತ್ತೆ ಮರು ಸಮೀಕ್ಷೆ ನಡೆಸಲಾಯಿತು. ಆಗ 1.28 ಲಕ್ಷ ಅನಧಿಕೃತ, 50,150 ಅಧಿಕೃತ ಒಟ್ಟು 1,79,001 ಉದ್ದಿಮೆಗಳಿರುವುದು ಬೆಳಕಿಗೆ ಬಂದಿತ್ತು. ಅಂದಾಜಿನ ಪ್ರಕಾರ ನಗರದಲ್ಲಿ 5 ಲಕ್ಷ ಪರವಾನಗಿ ಪಡೆಯದ ಉದ್ದಿಮೆಗಳಿದ್ದು ಇವುಗಳಿಂದ ಎಲ್ಲಾ ರೀತಿಯ ಅಧಿಕಾರಿಗಳು ಕೋಟ್ಯಂತರ ರೂ ವಸೂಲಿ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಲಕ್ಷಾಂತರ ಕುಟುಂಬಗಳಿಗೆ ಉದ್ಯೋಗ ನೀಡುತ್ತಿರುವ ಉದ್ದಿಮೆದಾರರಿಗೆ ಕಿರುಕುಳ ತಪ್ಪಿಸಬೇಕು. ಬೆಂಕಿ ಅವಘಡದಿಂದ ನಷ್ಟ ಅನುಭವಿಸಿರುವ ಸಂತ್ರಸ್ತರಿಗೆ ಸೂಕ್ತ ಪರಿಹಾರ, ವಾಸಿಸಲು ಮನೆ ನೀಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಮುಖಂಡರಾದ ಜನನಿ ಭರತ್ ಇದ್ದರು.