KSRTC: ಮೇ 20 ರಿಂದ ಹಮ್ಮಿಕೊಂಡಿರುವ ಮುಷ್ಕರಕ್ಕೆ ಬಿಎಂಟಿಸಿ-ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘ ಬೆಂಬಲ
ಬೆಂಗಳೂರಿನ ಟೌನ್ ಹಾಲ್ನಲ್ಲಿ ಮೇ 15, 2026ರ ಮಧ್ಯಾಹ್ನ 3ಗಂಟೆಗೆ ಏರ್ಪಡಿಸಿರುವ ಪೂರ್ವಭಾವಿ ಸಭೆಯಲ್ಲಿ ನಿವೃತ್ತ ನೌಕರರು ಭಾಗವಹಿಸುವಂತೆ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ಕರೆ ನೀಡಿದ್ದಾರೆ

ಬೆಂಗಳೂರು: ನಾಲ್ಕೂ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ, ಸಂಸ್ಥೆಯ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 20, 2026 ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು, ಈ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಇಪಿಎಸ್-95, ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘವು ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.

ಜಂಟಿ ಕ್ರಿಯಾ ಸಮಿತಿ, ಮುಷ್ಕರಕ್ಕೆ ಕರೆ ನೀಡಿದ್ದು, ಇದಕ್ಕೆ ಪೂರ್ವಭಾವಿಯಾಗಿ, ಕಾರ್ಮಿಕ ಮುಖಂಡರು ರಾಜ್ಯಾದ್ಯಂತ ಪ್ರವಾಸ ಮಾಡಿ, ರಾಜ್ಯ ಸರ್ಕಾರವು ಏಕ ಪಕ್ಷಿಯವಾಗಿ ಶೇ.12.5 ರಷ್ಟು ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ನೌಕರರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಇನ್ನು ಅದರಂತೆ ಬೆಂಗಳೂರಿನ ಟೌನ್ ಹಾಲ್ನಲ್ಲಿ ಮೇ 15, 2026ರ ಮಧ್ಯಾಹ್ನ 3ಗಂಟೆಗೆ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿದೆ. ಈ ಸಭೆಯಲ್ಲಿ ಕಾರ್ಮಿಕ ಮುಖಂಡರು ಹೋರಾಟದ ಮುಂದಿನ ರೂಪುರೇಷೆ ಬಗ್ಗೆ ಸಲಹೆ ಹಾಗೂ ಸೂಚನೆಗಳನ್ನು ನೀಡಲಿದ್ದಾರೆ. ಈ ಸಭೆಗೆ ಸಂಸ್ಥೆಯ ಹಾಲಿ ಸೇವೆಯಲ್ಲಿರುವ ಹಾಗೂ ನಿವೃತ್ತ ನೌಕರರನ್ನು ಸಹ ಆಹ್ವಾನಿಸಲಾಗಿದೆ.
ಇಪಿಎಸ್-95, ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘವು ಜಂಟಿ ಕ್ರಿಯಾ ಸಮಿತಿಯ ಜತೆ ಒಡಂಬಡಿಕೆ ಮಾಡಿಕೊಂಡಿದ್ದು, ಜಂಟಿ ಕ್ರಿಯಾ ಸಮಿತಿಯು ನಡೆಸುವ ಪ್ರತಿಭಟನೆ/ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಕಳೆದ ಜನವರಿ 13, 2026 ರಂದು ನಗರದ ಫ್ರೀಡಂ ಪಾರ್ಕ್ ನಲ್ಲಿ ನಾಲ್ಕೂ ಸಾರಿಗೆ ನಿಗಮಗಳ ಹಿತ ರಕ್ಷಣಾ ವೇದಿಕೆ ಬೃಹತ್ ಸಮಾವೇಶವನ್ನು ನಡೆಸಿದ್ದು, ಇಪಿಎಸ್ ನಿವೃತ್ತರು ಅಂದು ಭಾಗವಹಿಸಿದ್ದು ಸಹ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ ಆಗಿದೆ ಎಂದು ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
Related









