ಬೆಂಗಳೂರು: ಇಡೀ ದೇಶಕ್ಕೆ ಮಾದರಿಯಾದ ನ್ಯೂಡೆಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾದರಿ ವಿದ್ಯುಚ್ಛಕ್ತಿ ನೀತಿಯನ್ನು ರಾಜ್ಯದಲ್ಲೂ ಜಾರಿಗೆ ತರಬೇಕು ಹಾಗೂ ಈ ಕೂಡಲೇ ವಿದ್ಯುತ್ ದರ ಏರಿಕೆ ಆದೇಶವನ್ನು ರಾಜ್ಯ ಬಿಜೆಪಿ ಸರ್ಕಾರ ಹಿಂಪಡೆಯಬೇಕು ಎಂದು ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ ಆಗ್ರಹಿಸಿದರು.
ಮೈಸೂರು ಬ್ಯಾಂಕ್ ವೃತ್ತದ ಬಳಿಯ ಕಾವೇರಿ ಭವನದ ಎದುರು ಗುರುವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ನ್ಯೂಡೆಲ್ಲಿ ರಾಜ್ಯ ಕಿಂಚಿತ್ತೂ ವಿದ್ಯುತ್ ಉತ್ಪಾದನೆ ಮಾಡುವುದಿಲ್ಲ. ಎಲ್ಲವನ್ನೂ ಖಾಸಗಿ ಕಂಪನಿಗಳಿಂದ ಖರೀದಿಸಿ ವಿತರಿಸುತ್ತದೆ, ಆದರೂ ತನ್ನ ರಾಜ್ಯದ ಜನರಿಗೆ ಉಚಿತವಾಗಿ ವಿದ್ಯುತ್ ನೀಡುತ್ತಿದೆ. ಆದರೆ ಶೇ. 100 ರಷ್ಟು ಸ್ವಾವಲಂಭಿಯಾಗಿರುವ ನಮ್ಮ ಕರ್ನಾಟಕ ರಾಜ್ಯ ಈಗ ಶೇ. 6 ರಷ್ಟು ವಿದ್ಯುತ್ ದರ ಹೆಚ್ಚಳ ಮಾಡಿ ಜನಸಾಮಾನ್ಯರಿಗೆ ಹೊರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರ ಅನುಭವಿಸಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ವಿದ್ಯುತ್ ಖರೀದಿಯಲ್ಲಿ ಸಾಕಷ್ಟು ಹಗರಣ ನಡೆಸಿದ್ದು, ಅದನ್ನು ಜನ ಸಾಮಾನ್ಯರ ಮೇಲೆ ಹಾಕುತ್ತಿದೆ ಎಂದು ಕಿಡಿಕಾರಿದರು.
ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 200 ಯುನಿಟ್ ವಿದ್ಯುತ್ಅನ್ನು ಉಚಿತವಾಗಿ ನೀಡುತ್ತಿದ್ದು, 200 ಯುನಿಟ್ಗಿಂತ ಹೆಚ್ಚು ಬಳಸಿದರೆ ಅದನ್ನು ಅರ್ಧ ಬೆಲೆಗೆ ನೀಡಲಾಗುತ್ತಿದೆ. ಅತ್ಯಂತ ಕಡಿಮೆ ದರದಲ್ಲಿ ಹಾಗೂ ಉಚಿತವಾಗಿ ತನ್ನ ನಾಗರಿಕರಿಗೆ ಇಡೀ ದೇಶದಲ್ಲೆ ವಿದ್ಯುತ್ ನೀಡುವ ಏಕೈಕ ರಾಜ್ಯ ಎಂದರೆ ಕೇಜ್ರಿವಾಲ್ ನೇತೃತ್ವದ ನ್ಯೂಡೆಲ್ಲಿ ಸರ್ಕಾರ ಮಾತ್ರ ಎಂದರು.
ಇಡೀ ದೇಶಕ್ಕೆ ಮಾದರಿಯಾದ ಕೇಜ್ರಿವಾಲ್ ಮಾದರಿ ವಿದ್ಯುಚ್ಛಕ್ತಿ ನೀತಿಯನ್ನು ಕರ್ನಾಟಕ ರಾಜ್ಯದಲ್ಲಿ ಅಳವಡಿಸಿ 200 ಯುನಿಟ್ ವಿದ್ಯುತ್ಛಕ್ತಿಯನ್ನು ನೀಡುವ ತಾಕತ್ತು ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇದೇಯೇ ಎಂದು ಪ್ರಶ್ನಿಸಿದರು.
ಈ ಕೂಡಲೇ ಈ ದರ ಹೆಚ್ಚಳದ ಆದೇಶವನ್ನು ಸರ್ಕಾರ ಹಿಂಪಡೆಯದೇ ಇದ್ದರೆ ಇಡೀ ರಾಜ್ಯದಾದ್ಯಂತ ಆಮ್ ಆದ್ಮಿ ಪಕ್ಷ ಸರಣಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಹಾಗೂ ನಾಳೆಯಿಂದ ನಮ್ಮ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಬೆಂಗಳೂರಿನ ಪ್ರತಿ ಮನೆ ಮನೆಗೆ ತೆರಳಿ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಾಗೂ ಕೆಟ್ಟ ಆಡಳಿತದ ಬಗ್ಗೆ ಜನರಿಗೆ ತಿಳಿಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ರಾಜ್ಯ ಸಹ ಸಂಚಾಲಕ ವಿಜಯ್ ಶರ್ಮ, ಗೋಪಾಲ ರೆಡ್ಡಿ, ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಲಕ್ಷ್ಮೀಕಾಂತ್ ರಾವ್, ಎಸ್.ವಿ. ಪಣಿರಾಜ್, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಸದಂ, ಉಪಾಧ್ಯಕ್ಷ ಸುರೇಶ್ ರಾಥೋಡ್, ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ, ಮುಖ್ಯ ವಕ್ತಾರ ಶರತ್ ಖಾದ್ರಿ, ಜ್ಯೋತೀಶ್, ರಾಜಾಜಿನಗರ ಕ್ಷೇತ್ರದ ಹಿರಿಯ ಮುಖಂಡ ಗುರುಮೂರ್ತಿ, ಚನ್ನಪ್ಪ ಗೌಡ, ಆಟೋ ಘಟಕದ ಅಯೂಬ್ ಖಾನ್, ಜಗದೀಶ್ ಚಂದ್ರ, ಸತೀಶ್ ಗೌಡ ಸೇರಿ ಕಾರ್ಯಕರ್ತರು ಇದ್ದರು.