ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಪತಿ ಮಹಾಶಯನೊಬ್ಬ ತನ್ನ ಪತ್ನಿಯನ್ನೇ ಬರ್ಬರವಾಗಿ ಹತ್ಯೆಮಾಡಿರುವ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ನರೆನೂರು ಗ್ರಾಮದಲ್ಲಿ ನಡೆದಿದೆ.
ಯಲ್ಲವ್ವ ಪೂಜಾರ(24) ಕೊಲೆಯಾದ ಮಹಿಳೆ. ರಮೇಶ್ ಪೂಜಾರ ಹತ್ಯೆಮಾಡಿದ ಆರೋಪಿ.
ಪದೇಪದೆ ಕುಡಿದು ಮನೆಗೆ ಬರುತ್ತಿದ್ದ ರಮೇಶ್, ಪತ್ನಿಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ನಿತ್ಯ ಜಗಳವಾಡುತ್ತಿದ್ದ. ಅಲ್ಲದೇ ಆಕೆಯ ಅನೈತಿಕ ಸಂಬಂಧದ ಬಗ್ಗೆ ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದರು. ಇದರಿಂದ ನೊಂದು ಕುಗ್ಗಿಹೋಗಿದ್ದ ಪತಿ ರಮೇಶ ನಿನ್ನೆ ರಾತ್ರಿಯೂ ಕಂಠಮಟ್ಟ ಕುಡಿದು ಬಂದು ಪತ್ನಿಯ ಜೊತೆ ಜಗಳವಾಡಿದ್ದಾನೆ.
ಜಗಳ ತಾರಕಕ್ಕೇರುತ್ತಿದ್ದಂತೆಯೇ ಅಲ್ಲೇ ಇದ್ದ ಕೊಡಲಿಯಿಂದ ಪತ್ನಿಯ ತಲೆಗೆ ಬೀಸಿದ್ದಾನೆ. ಅವನ ಹೊಡೆತದ ರಭಸಕ್ಕೆ ಕೊಡಲಿ ಆಕೆಯ ತಲೆಯಲ್ಲೇ ಉಳಿದುಕೊಂಡಿದೆ. ತಕ್ಷಣ ಸ್ಥಳೀಯರು ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಕೊಡಲಿಯನ್ನು ತಲೆಯಿಂದ ತೆಗೆಯಲು ಸಾಧ್ಯವಾಗಿಲ್ಲ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಯಲ್ಲವ್ವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ವಿಷಯ ತಿಳಿದ ಕೆರೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು, ಆರೋಪಿ ರಮೇಶ್ ನನ್ನು ವಶಕ್ಕೆ ಪಡೆದಿದ್ದಾರೆ.