ಮೈಸೂರು: ಯುವತಿಯರನ್ನು ಮುಂದಿಟ್ಟುಕೊಂಡು ಹನಿಟ್ರ್ಯಾಪ್‌ನಲ್ಲಿ ತೊಡಗಿ, ನಂತರ ಹನಿಟ್ರ್ಯಾಪ್‌ನಲ್ಲಿ ಸಿಲುಕಿದ ವ್ಯಕ್ತಿಗಳನ್ನು ಬ್ಲ್ಯಾಕ್‌ಮೆಲ್ ಮಾಡುತ್ತಿದ್ದ ಐವರು ಆರೋಪಿಗಳನ್ನು ಕುವೆಂಪು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನವೀನ್, ಶಿವರಾಜು, ಹರೀಶ್, ಅನಿತಾ, ವಿಜಿ ಬಂಧಿತ ಆರೋಪಿಗಳು. ಮೈಸೂರು ಮಾತ್ರವಲ್ಲದೆ ಹೊರ ಜಿಲ್ಲೆಗಳಲ್ಲಿಯೂ ಯುವತಿಯರನ್ನು ಬಳಸಿಕೊಂಡು ಹನಿಟ್ರ್ಯಾಪ್ ನಡೆಸುತ್ತಿದ್ದುದ್ದಾಗಿ ಪೊಲೀಸರು ವಿಚಾರಣೆ ವೇಳೆ ಆರೋಪಿಗಳು ಬಾಯಿಬಿಟ್ಟಿದ್ದಾರೆ.
ಆರೋಪಿಗಳ ಮೋಸದ ಜಾಲಕ್ಕೆ ಸಿಲುಕಿ ಕಿರುಕುಳ ಅನುಭವಿಸುತ್ತಿದ್ದ ವ್ಯಕ್ತಿ ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ಸಂಬಂಧ ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿತ್ತು. ಕುವೆಂಪು ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರಾಜು, ರಾಜಶೇಖರ್, ಮಹಾವೀರ, ಮಹದೇವ್ ಸೇರಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ದೂರು ನೀಡಿದ ವ್ಯಕ್ತಿಯಿಂದಲೂ 31 ಲಕ್ಷ ರೂ.ಗಳನ್ನು ಆರೋಪಿಗಳು ವಸೂಲಿ ಮಾಡಿರುವುದಾಗಿ ತಿಳಿದು ಬಂದಿದೆ. ಅಷ್ಟೇ ಅಲ್ಲದೇ ಇನ್ನು ಹಲವು ವ್ಯಕ್ತಿಗಳನ್ನು ಹನಿಟ್ರ್ಯಾಪ್‌ನಲ್ಲಿ ಬೀಳಿಸಿ ಹಣ ಪೀಕುತ್ತಿದ್ದರು ಎಂದು ತಿಳಿದು ಬಂದಿದೆ. ಈ ಸಂಬಂಧ ಹೈಪ್ರೊಫೈಲ್ ವ್ಯಕ್ತಿಗಳೂ ಸೇರಿದಂತೆ ಹಲವರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ನ್ಯಾಯಾಂಗದ ಮುಂದೆ ಹಾಜರುಪಡಿಸಿದ್ದಾರೆ. ಇನ್ನೂ ಕೆಲವರಿಗಾಗಿ ಬಲೆ ಬೀಸಿದ್ದಾರೆ.