ಸಿಬಿಎಸ್‌ಇ ತ್ರಿಭಾಷಾ ನೀತಿ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಪಾಲಕರು: ಮುಂದಿನ ವಾರ ವಿಚಾರಣೆ
9ನೇ ತರಗತಿಯಲ್ಲಿ ಎರಡು ಹೆಚ್ಚುವರಿ ಭಾಷೆಗಳನ್ನು ಕಲಿಯುವ ಹಠಾತ್ ಅಗತ್ಯವು 10ನೇ ತರಗತಿಯ ಬೋರ್ಡ್ ಪರೀಕ್ಷೆಗಳ ತಯಾರಿಗೆ ಅಡ್ಡಿಯಾಗುತ್ತದೆ ಮತ್ತು ವಿದ್ಯಾರ್ಥಿಗಳ ಮೇಲೆ ಬೇಡದ ಅಥವಾ ಅಸಮಂಜಸ ಹೊರೆ ಹೇರಿದಂತಾಗುತ್ತದೆ ಎಂದು ವಕೀಲರು ವಾದ ಮಂಡಿಸಿದ್ದಾರೆ

ನ್ಯೂಡೆಲ್ಲಿ: 9ನೇ ತರಗತಿಯ ವಿದ್ಯಾರ್ಥಿಗಳಿಗೂ ತ್ರಿಭಾಷಾ ಸೂತ್ರದಡಿ ಅಂದರೆ ಮೂರು ಭಾಷೆಗಳನ್ನು ಕಡ್ಡಾಯಗೊಳಿಸುವ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ ಹೊಸ ನೀತಿ ವಿರುದ್ಧ ಸಿಡಿದೆದ್ದಿರುವ ಪಾಲಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು ಈ ನೀತಿಯನ್ನು ಕೈ ಬಿಡುವಂತೆ ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ.

ಈ ಸಂಬಂಧ ವಿದ್ಯಾರ್ಥಿಗಳು ಮತ್ತು ಪೋಷಕರು ಸಲ್ಲಿಸಿದ್ದ ಅರ್ಜಿ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ನೇತೃತ್ವದ ತ್ರಿಭಾಷಾ ಸದಸ್ಯ ಪೀಠದ ಮುಂದೆ ಪ್ರಸ್ತಾಪಿಸಿದರು.
9ನೇ ತರಗತಿಯಲ್ಲಿ ಎರಡು ಹೆಚ್ಚುವರಿ ಭಾಷೆಗಳನ್ನು ಕಲಿಯುವ ಹಠಾತ್ ಅಗತ್ಯವು 10ನೇ ತರಗತಿಯ ಬೋರ್ಡ್ ಪರೀಕ್ಷೆಗಳ ತಯಾರಿಗೆ ಅಡ್ಡಿಯಾಗುತ್ತದೆ ಮತ್ತು ವಿದ್ಯಾರ್ಥಿಗಳ ಮೇಲೆ ಬೇಡದ ಅಥವಾ ಅಸಮಂಜಸ ಹೊರೆ ಹೇರಿದಂತಾಗುತ್ತದೆ ಎಂದು ರೋಹಟಗಿ ವಾದ ಮಂಡಿಸಿದರು.
ಇದ್ದಕ್ಕಿದ್ದಂತೆ ಕಲಿತು 10ನೇ ತರಗತಿಯಲ್ಲಿ ಕಾಣಿಸಿಕೊಳ್ಳುವುದು ಹೇಗೆ..? ಇದು ಅವ್ಯವಸ್ಥೆಯನ್ನು ಸೃಷ್ಟಿಸುತ್ತದೆ ಎಂದು ರೋಹಟಗಿ ವಾದಿಸಿದರು. ವಾದ ಆಲಿಸಿದ ಬಳಿಕ ಪೀಠವು, ಮುಂದಿನ ವಾರ ವಿಚಾರಣೆಗೆ ಈ ವಿಷಯವನ್ನು ಪಟ್ಟಿ ಮಾಡುವುದಾಗಿ ಹೇಳಿದೆ.
ತ್ರಿಭಾಷಾ ಸೂತ್ರಕ್ಕೆ ಒತ್ತು ನೀಡುವ ರಾಷ್ಟ್ರೀಯ ಶಿಕ್ಷಣ ನೀತಿ 2020 ನೊಂದಿಗೆ ಹೊಂದಿಕೊಂಡ ವಿಶಾಲ ಬದಲಾವಣೆಯ ಭಾಗವಾಗಿದೆ. ಈ ನೀತಿಯು ವಿದ್ಯಾರ್ಥಿಗಳು ಕನಿಷ್ಠ ಎರಡು ಭಾರತೀಯ ಭಾಷೆಗಳನ್ನು ಒಳಗೊಂಡಂತೆ ಬಹು ಭಾಷೆಗಳನ್ನು ಕಲಿಯಲು ಪ್ರೋತ್ಸಾಹಿಸುತ್ತದೆ. ರಾಜ್ಯಗಳು ಮತ್ತು ಶಾಲೆಗಳಿಗೆ ಆದ್ಯತೆ ಬಿಡಲಾಗಿದೆ.
ಸಿಬಿಎಸ್‌ಇ ವಿದ್ಯಾರ್ಥಿಗಳು 10ನೇ ತರಗತಿಯವರೆಗೆ ಎರಡು ಭಾಷೆಗಳನ್ನು ಅಧ್ಯಯನ ಮಾಡುತ್ತಿದ್ದರು. ಈ ಭಾಷೆಗಳು ಸಾಮಾನ್ಯವಾಗಿ ಇಂಗ್ಲಿಷ್ ಮತ್ತು ಎರಡನೇ ಭಾಷೆ ಆಗಿದ್ದವು. ಹೊಸ ಚೌಕಟ್ಟು 9ನೇ ತರಗತಿಗೆ ಪ್ರವೇಶಿಸುವ ವಿದ್ಯಾರ್ಥಿಗಳು ಹೆಚ್ಚುವರಿ ಭಾಷಾ ಘಟಕವನ್ನು ತೆಗೆದುಕೊಳ್ಳುವ ಅಗತ್ಯವನ್ನು ಹೆಚ್ಚಿಸುವ ಮೂಲಕ ಇದನ್ನು ವಿಸ್ತರಿಸುತ್ತದೆ ಎಂದು ವರದಿಯಾಗಿದೆ.
ಇನ್ನು ಇದು ಮಾಧ್ಯಮಿಕ ಹಂತದಲ್ಲಿ ಅಧ್ಯಯನ ಮಾಡುವ ಭಾಷೆಗಳ ಸಂಖ್ಯೆಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಇದರಿಂದ ಮಕ್ಕಳ ಓದಿನ ಮೇಲೆ ಭಾರಿ ಪರಿಣಾಮ ಬೀರುತ್ತದೆ ಎಂದು ಪಾಲಕರು ಭಾವಿಸಿದ್ದು ಈ ನೀತಿಯನ್ನು ಕೈ ಬಿಡುವಂತೆ ಮನವಿ ಮಾಡಿದ್ದಾರೆ.
Related









