ಬೆಂಗಳೂರಿನಲ್ಲಿ ಅಬ್ಬರಿಸಿದ ವರುಣ, ನಮ್ಮ ಮೆಟ್ರೋ ಹಳಿ ಮೇಲೆ ಬಿದ್ದ ಮರದ ಕೊಂಬೆ, ಪ್ರಯಾಣಿಕರ ಪರದಾಟ
ಇಂದು ಬೆಳಗ್ಗೆ 10 ಗಂಟೆ ಬಳಿಕ ಭಾರಿ ಬಿಸಿಯ ವಾತಾವರಣ ಸೃಷ್ಟಿಯಾಗಿತ್ತು. ಅದನ್ನು ಗಮನಿಸಿದ ನಾಗರಿಕರು ಇಂದು ಭಾರಿ ಮಳೆ ಬರಲಿದೆ ಎಂದು ಊಹೆ ಮಾಡಿದ್ದರು. ಅದರಂತೆ ಸಂಜೆ ಆಗುತ್ತಿದ್ದಂತೆ ಭಾರಿ ಮಳೆ ಸುರಿದಿದೆ.

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಇಂದು ಮತ್ತೆ ಅಬ್ಬರಿಸಿ ಬೊಬ್ಬಿರಿದಿದ್ದಾನೆ ವರುಣ. ಸಂಜೆ ಜಿಟಿಜಿಟಿಯಾಗಿ ಶುರುವಾದ ಮಳೆ ನೋಡನೋಡುತ್ತಿದ್ದಂತೆ ಜೋರು ಗಾಳಿ ಸಹಿತ ಅಬ್ಬರದಿಂದ ಇಳಿಗೆ ಬಿದ್ದಿದ್ದು, ಕೆಲವೆಡೆ ಅವಾಂತರವನ್ನೇ ಸೇಷ್ಟಿಸಿತು.

ಇಂದು ಬೆಳಗ್ಗೆ 10 ಗಂಟೆ ಬಳಿಕ ಭಾರಿ ಬಿಸಿಯ ವಾತಾವರಣ ಸೃಷ್ಟಿಯಾಗಿತ್ತು. ಅದನ್ನು ಗಮನಿಸಿದ ನಾಗರಿಕರು ಇಂದು ಭಾರಿ ಮಳೆ ಬರಲಿದೆ ಎಂದು ಊಹೆ ಮಾಡಿದ್ದರು. ಅದರಂತೆ ಸಂಜೆ ಆಗುತ್ತಿದ್ದಂತೆ ಭಾರಿ ಮಳೆ ಸುರಿದಿದೆ.
ನಗರದ ಟೌನ್ ಹಾಲ್, ಮೆಜೆಸ್ಟಿಕ್, ಮಾರ್ಕೆಟ್, ವಿಧಾನಸೌಧ ಸುತ್ತಮುತ್ತ ಭಾರಿ ಮಳೆಯಾಗಿ ವಾಹನ ಸವಾರರು ಪರದಾಡಿದ್ದಾರೆ. ಗಾಳಿ ಸಹಿತ ಮಳೆಗೆ ನಮ್ಮ ಮೆಟ್ರೋ ಹಳಿ ಮೇಲೆ ಮರದ ಕೊಂಬೆಯೊಂದು ಬಿದ್ದ ಪರಿಣಾಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
ಐಟಿಪಿಎಲ್ ಮತ್ತು ಸತ್ಯಸಾಯಿ ಪ್ರಶಾಂತ್ ನಿಲಯಂ ನಡುವೆ ಹಳಿಯ ಮೇಲೆ ಮರದ ಕೊಂಬೆ ಬಿದ್ದ ಹಿನ್ನೆಲೆ ವೈಟ್‌ಫೀಲ್ಡ್ ಮತ್ತು ಗರುಡಾಚಾರ್ ಪಾಳ್ಯ ನಡುವೆ ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿತ್ತು. ಇದರಿಂದ ಪ್ರಯಾಣಿಕರು ಪರದಾಡಿದರು.
ಡಿವೈಡರ್ ಕಾಣದೇ ಕಾರು ಹತ್ತಿತ್ತು: ಜೋರಾಗಿ ಸುರಿದ ಮಳೆಯಿಂದಾಗಿ ಡಿವೈಡರ್ ಕಾಣದೇ ಡಿವೈಡರ್ ಮೇಲೆಯೇ ಚಾಲಕನೊಬ್ಬ ಕಾರು ಹತ್ತಿಸಿದ ಘಟನೆ ಪೂರ್ಣಿಮಾ ಥಿಯೆಟರ್ ಬಳಿ ನಡೆದಿದೆ. ಇನ್ನು ಡಿವೈಡರ್‌ನಿಂದ ಕಾರು ಹೊರತೆಗೆಯಲು ಹರಸಾಹಸ ಪಡಬೇಕಾಯಿತು.
ಭರ್ಜರಿ ಮಳೆಯಿಂದಾಗಿ ನಗರದ ಹಲವು ರಸ್ತೆಗಳು ಕೆರೆಯಂತಾದವು. ಇನ್ನು ಬನಶಂಕರಿ, ಕುಮಾರಸ್ವಾಮಿ ಬಡಾವಣೆ ಸೇರಿದಂತೆ ನಗರದ ಹಲವೆಡೆ ಧಾರಾಕಾರ ಮಳೆಗೆ ವಾಹನ ಸವಾರರು ಪರದಾಡಿದ್ದಾರೆ. ದ್ವಿಚಕ್ರ ವಾಹನ ಸವಾರರು, ಆಟೋ ಸವಾರರು ಅಕ್ಷರಶಃ ನಲುಗಿ ಹೋಗಿದ್ದಾರೆ.
ಇನ್ನು ಅತ್ತ ಶಿವಾನಂದ ಸರ್ಕಲ್ ಬಳಿಯ ಬೆಂಗಳೂರು ಕೆಫೆಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ಇತ್ತ ಪೀಣ್ಯಾ, ದಾಸರಹಳ್ಳಿ, ಬಾಗಲಗುಂಟೆ ಬಾಣಾವರ ಭಾಗದಲ್ಲಿ ಮಳೆಯಾಗಿದ್ದು, ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದರು. ಮೂರು ಗಂಟೆಗಳ ಕಾಲ ಬೆಂಗಳೂರು ಸೇರಿ 9 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದ್ದು ಜನರು ಎಚ್ಚರಿಕೆಯಿಂದ ಓಡಾಡಬೇಕಿದೆ.
Related









