BMTC: 30ನೇ ಘಟಕದ ಎಲೆಕ್ಟ್ರಿಕ್ ಬಸ್‌ಗಳ ಅಸಮರ್ಪಕ ಕಾರ್ಯಾಚರಣೆ ವಿರುದ್ಧ ಸಿಎಸ್‌ಗೆ ದೂರು ನೀಡಿದ ನಿರ್ವಾಹಕರು
ಸ್ಚಿಚ್ ಕಂಪನಿಯ ವಿದ್ಯುತ್ ಚಾಲಿತ ವಾಹನಗಳ ಆಚರಣೆ ಘಟಕ-30ರಲ್ಲಿ ಶೇ.50ರಷ್ಟು ವಿಫಲವಾಗಿದ್ದರೂ ಸಹ ಸಂಸ್ಥೆಯ ಅಧಿಕಾರಿಗಳು ಸ್ವಿಚ್ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳದೇ ನಿರ್ವಾಹಕರಾದ ನಮ್ಮ ಹೆಚ್ಚುವರಿ ಭತ್ಯೆ ಕಡಿತಗೊಳಿಸಿ, ನಮ್ಮ ರಜೆ ಬರೆಸಿಕೊಳ್ಳುತ್ತಿರುವುದರಿಂದ ನಮಗೆ ಆರ್ಥಿಕ ಹೊರೆ ಹಾಗೂ ನಾವು ನಮ್ಮ ರಜೆ ಕಳೆದುಕೊಳ್ಳುತ್ತಿದ್ದೇವೆ.

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಪುಟ್ಟೇನಹಳ್ಳಿಯಲ್ಲಿರುವ 30ನೇ ಘಟಕದಿಂದ ಕಾರ್ಯಾಚರಣೆಗೊಳ್ಳುತ್ತಿರುವ ಸ್ವಿಚ್ ಕಂಪನಿಯ ವಿದ್ಯುತ್ ಚಾಲಿತ ವಾಹನಗಳ ಅಸಮರ್ಪಕ ಕಾರ್ಯಾಚರಣೆಯಿಂದ ನಮಗೆ ಸರಿಯಾಗಿ ಡ್ಯೂಟಿ ಸಿಗುತ್ತಿಲ್ಲ ಎಂದು ಆರೋಪಿಸಿ ನಿರ್ವಾಹಕರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿದ್ದು, ಇದನ್ನು ಸಾರಿಗೆ ಸಚಿವರ ಗಮನಕ್ಕೆ ತಂದು ಸರಿಪಡಿಸಲು ಮನವಿ ಮಾಡಿದ್ದಾರೆ.
ಘಟಕ-30ರ ನಿರ್ವಾಹಕರಾದ ನಮ್ಮನ್ನು ಸಂಸ್ಥೆಯಿಂದ ಕಾರ್ಯಾಚರಣೆಗೊಳ್ಳುತಿರುವ ಡೀಸೆಲ್ ಬಸ್‌ಗಳಿರುವ ಘಟಕಗಳಿಗೆ ವರ್ಗಾವಣೆ ಮಾಡಿ/ ಸ್ವಿಚ್ ಕಂಪನಿಯೊಂದಿಗಿನ ಕರಾರು/ ಪರವಾನಗಿ ರದ್ದುಪಡಿಸಿ. ನಮ್ಮ ಬೆವರಿನ ಶ್ರಮಕ್ಕೆ ನ್ಯಾಯ ಕೊಡಿಸಿ ಎಂದು ಸಿಎಸ್ ಅವರಲ್ಲಿ ಮನವಿ ಮಾಡಿದ್ದಾರೆ.
ಈ ವಿಷಯಕ್ಕೆ ಸಂಬಂಧಪಟ್ಟಂತೆ, ಘಟಕ-30ರಲ್ಲಿ ಸುಮಾರು 4 ವರ್ಷಗಳಿಂದ ಸ್ವಿಚ್ ಕಂಪನಿಯವರಿಂದ ವಿದ್ಯುತ್ ಚಾಲಿತ ಎಲೆಕ್ಟ್ರಿಕ್ ಬಸ್‌ಗಳು ಕಾರ್ಯಾಚರಣೆಗೊಳಿಸುತ್ತಿದ್ದು, ಪ್ರತಿನಿತ್ಯ ಅಂದಾಜು 120 ಅನುಸೂಚಿಗಳಲ್ಲಿ ಕಾರ್ಯಾಚರಣೆಗೊಳಿಸಬೇಕಾಗಿದೆ.
ಆದರೆ, ಇತ್ತೀಚೆಗೆ ಸ್ಚಿಚ್ ಕಂಪನಿಯ ಈ ವಿದ್ಯುತ್ ಚಾಲಿತ ವಾಹನಗಳು ಹಳೆಯದಾಗಿ ಸಮರ್ಪಕವಾಗಿ ಎಲ್ಲ ಸುತ್ತುಗಳನ್ನು ಆಚರಣೆ ಮಾಡದೆ ಎಲ್ಲಂದರಲ್ಲಿ ಕೆಟ್ಟು ನಿಲ್ಲುವುದು, ಚಾರ್ಜಿಂಗ್ ಸಮಸ್ಯೆ, ವಾಹನಗಳ ಕೊರತೆ, ಚಾಲಕರ ಕೊರತೆ ಇತ್ಯಾದಿಗಳಿಂದ 30ನೇ ಘಟಕದಲ್ಲಿ ಕರ್ತವ್ಯ ನಿರ್ವಹಿಸುವ ನಿರ್ವಾಹಕರಾದ ನಾವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುತ್ತಿದ್ದೇವೆ.
ನಾವು ಪ್ರಮುಖವಾಗಿ ಎದುರಿಸುತ್ತಿರುವ ಸಮಸ್ಯೆಗಳು: 1. ಸರಿಯಾದ ಸಮಯಕ್ಕೆ ಕಾಯಂಆಗಿ ನುರಿತ ಚಾಲಕರನ್ನು ನಿಯೋಜಿಸದೆ ಇರುವುದು, ದಿನಕ್ಕೊಬ್ಬ ಚಾಲಕರನ್ನು ನೀಡುವುದು. ತರಬೇತಿ ಇಲ್ಲದ ಚಾಲಕರಿಂದ ಮಾರ್ಗಾಚರಣೆಯಲ್ಲಿ ಏರು-ಪೇರಾಗಿ ಪ್ರಯಾಣಿಕರಿಗೆ ನಿಗದಿತ ಸಮಯಕ್ಕೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ.
2. ನಿಗದಿತ ಸಮಯಕ್ಕೆ ವಾಹನ ನೀಡದೇ ಇರುವುದು, ಸ್ವಿಚ್ ಕಂಪನಿಯ ಯಾವುದೇ ಉನ್ನತ ಮಟ್ಟದ ಅಧಿಕಾರಿಗಳು ಘಟಕದಲ್ಲಿ ಲಭ್ಯವಿಲ್ಲದೇ ಇರುವುದು.
3. ಚಾರ್ಜಿಂಗ್ ಸಮಸ್ಯೆ ಇನ್ನಿತರೆ ತಾಂತ್ರಿಕ ಸಮಸ್ಯೆಗಳಿಂದ ವಾಹನಗಳು ರಸ್ತೆ ಮಧ್ಯೆ ಕೆಟ್ಟು ನಿಲ್ಲುತ್ತಿರುವುದು. 4. ನೌಕರರಿಗೆ ಮೂಲ ಭೂತ ಸೌಕರ್ಯವಾದ ಕುಡಿಯುವ ನೀರು ಒದಗಿಸದಿರುವುದು.
5. ಸಾಮಾನ್ಯ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ನಿರ್ವಾಹಕರು ಬೆಳಗ್ಗೆ 7 ಗಂಟೆಗೆ ಘಟಕಕ್ಕೆ ಹಾಜರಾದರೂ ನಿಗದಿತ ಸಮಯಕ್ಕೆ ಚಾಲಕರು / ವಾಹನ ನೀಡದೆ ಇರುವುದರಿಂದ ಪ್ರತಿ ನಿತ್ಯ 2-3ಗಂಟೆ ತಡವಾಗಿ ನಿಯೋಜಿಸಿದ ಮಾರ್ಗಕ್ಕೆ ಹೋಗಬೇಕಾಗಿದ್ದು, ಸಾಮಾನ್ಯ ಪಾಳಿಯಲ್ಲಿ 2-3 ಗಂಟೆ ತಡವಾಗಿ ಆಚರಣೆ ಆದರೆ ಎಲ್ಲ ಸುತ್ತುಗಳನ್ನು ಮಾಡಲು ಸಾಧ್ಯವಾಗದೇ ಪ್ರತಿ ನಿತ್ಯ ಅನುಸೂಚಿಗೆ ನಿಗದಿಯಾಗಿರುವ ಹೆಚ್ಚುವರಿ ಒಟಿ ಭತ್ಯೆಯಿಂದ ವಂಚಿತರಾಗಿ 12-14 ಗಂಟೆ ಕೆಲಸಕ್ಕೆ ಹಾಜರಾಗಿಯೂ ಯಾವುದೇ ಹೆಚ್ಚುವರಿ ಭತ್ಯೆ ಇಲ್ಲದೆ ಪ್ರತಿ ತಿಂಗಳು ನಿರ್ವಾಹಕರು ಹೆಚ್ಚುವರಿ ಭತ್ಯೆ ಕಳೆದುಕೊಳ್ಳಬೇಕಾಗಿದೆ.
6. ರಾತ್ರಿ ವಸತಿ ಪಾಳಿಯಲ್ಲಿ ಕೆಲಸ ನಿರ್ವಹಿಸುವ ನಿರ್ವಾಹಕರದು ಸಹ ಇದೇ ರೀತಿ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಘಟಕ್ಕೆ ಹಾಜರಾಗಿದ್ದರೂ ಸಹ ಚಾಲಕರ ಕೊರತೆ/ ವಾಹನಗಳ ಕೊರತೆಯಿಂದ ಪ್ರತಿ ನಿತ್ಯ 3-4 ಗಂಟೆ ಘಟಕದಲ್ಲೇ ಉಳಿಯಬೇಕಾಗಿದೆ. ಸರಿಯಾದ ಆಹಾರ, ಊಟ ಇಲ್ಲದೆ ಘಟಕದಲ್ಲಿಯೇ ಕಾಲ ಕಳೆಯಬೇಕಾಗಿದೆ.
7. ಕೆಲವೊಮ್ಮೆ ವಾಹನ ಹಾಗೂ ಚಾಲಕರು ಇಲ್ಲದಿದ್ದ ಪಕ್ಷದಲ್ಲಿ 5-6 ಗಂಟೆ ಘಟಕದಲ್ಲಿ ಇದ್ದರೂ ಸಹ ನಮ್ಮ ರಜೆಯನ್ನು ಬರೆದುಕೊಡಬೇಕಾದ ಪರಿಸ್ಥಿತಿ ಇದೆ.
8. ಸ್ಚಿಚ್ ಕಂಪನಿಯ ವಿದ್ಯುತ್ ಚಾಲಿತ ವಾಹನಗಳ ಆಚರಣೆ ಘಟಕ-30ರಲ್ಲಿ ಶೇ.50ರಷ್ಟು ವಿಫಲವಾಗಿದ್ದರೂ ಸಹ ಸಂಸ್ಥೆಯ ಅಧಿಕಾರಿಗಳು ಸ್ವಿಚ್ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳದೇ ನಿರ್ವಾಹಕರಾದ ನಮ್ಮ ಹೆಚ್ಚುವರಿ ಭತ್ಯೆ ಕಡಿತಗೊಳಿಸಿ, ನಮ್ಮ ರಜೆ ಬರೆಸಿಕೊಳ್ಳುತ್ತಿರುವುದರಿಂದ ನಮಗೆ ಆರ್ಥಿಕ ಹೊರೆ ಹಾಗೂ ನಾವು ನಮ್ಮ ರಜೆ ಕಳೆದುಕೊಳ್ಳುತ್ತಿದ್ದೇವೆ.
ನಮ್ಮ ಬೇಡಿಕೆಗಳು: 1. ನಮ್ಮನ್ನು ಈ ಘಟಕದಿಂದ ಡೀಸೆಲ್ ಘಟಕಗಳಿಗೆ ವರ್ಗಾಯಿಸಿ. 2. ವರ್ಗಾವಣೆ ಸಾಧ್ಯವಿಲ್ಲದಿದ್ದಲ್ಲಿ ವಾಹನ ಕೊರತೆ/ ಚಾಲಕರ ಕೊರತೆಯಿಂದ ಅನುಸೂಚಿ ರದ್ದಾದಲ್ಲಿ ಕರ್ತವ್ಯಕ್ಕೆ ಹಾಜರಾಗಿರುವ ನಿರ್ವಾಹಕರಿಗೆ ಹಾಜರಾತಿ ನೀಡಿ ಸ್ವಚ್ ಕಂಪನಿಗೆ ವಿಧಿಸುವ ಹಣದಿಂದ ನಮಗೆ ವೇತನ ನೀಡಬೇಕು.
3. ಸಾಮಾನ್ಯ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ನಿರ್ವಾಹಕರುಗಳಿಗೆ ಅನುಸೂಚಿ ವಿಳಂಬವಾಗಿ ಆಚರಣೆಯಾಗಿ ಸುತ್ತುಗಳು ರದ್ದಾದಲ್ಲಿ ಅನುಸೂಚಿಗೆ ನಿಗದಿಪಡಿಸಿರುವ ಪೂರ್ಣ ಒಟಿ (ಹೆಚ್ಚುವರಿ ಭತ್ಯೆ ನೀಡುವುದು). (ಸ್ವಿಚ್ ಕಂಪನಿಯಿಂದ ವಸೂಲು ಮಾಡುವ ದಂಡದ ಹಣದಲ್ಲಿ ). 4. ಶುದ್ದ ಕುಡಿಯುವ ನೀರು ಒದಗಿಸುವುದು.
ಈ ಎಲ್ಲ ಅಂಶಗಳನ್ನು ಬೆಂಗಳೂರು ನಗರ ಸಾರ್ವಜನಿಕ ಪ್ರಯಾಣಿಕರ ಹಿತದೃಷ್ಟಿಯಿಂದ ಹಾಗೂ ಸಂಸ್ಥೆಯ ನಿರ್ವಾಹಕರ ಹಿತದೃಷ್ಟಿಯಿಂದ ಖುದ್ದು ಘಟಕಕ್ಕೆ ಹಾಜರಾಗಿ ವಾಸ್ತವಾಂಶಗಳನ್ನು ಮನಗಂಡು ಶೋಷಣೆಗೆ ಒಳಗಾಗಿರುವ ಘಟಕ-30ರ ನಿರ್ವಾಹಕರಿಗೆ ನ್ಯಾಯ ಒದಗಿಸಬೇಕೆಂದು ಘಟಕದ ಸಮಸ್ತ ನಿರ್ವಾಹಕರು ಸಿಎಸ್ ಅವರಲ್ಲಿ ಮನವಿ ಮಾಡಿದ್ದಾರೆ.
Related









