- ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ವಿಧಾನಪರಿಷತ್ನ ಒಂದು ದಿನದ ವಿಶೇಷ ಅಧಿವೇಶನ ಇಂದು (ಡಿ.15) ನಡೆಯಲಿದ್ದು, ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯದ ಪರ–ವಿರೋಧದ ನಡೆಯ ನಿಗೂಢತೆ ಕುತೂಹಲಕ್ಕೆ ಕಾರಣವಾಗಿದೆ.
ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರನ್ನು ಪದಚ್ಯುತಗೊಳಿಸಲೇಬೇಕೆಂಬ ಹಟಕ್ಕೆ ಬಿದ್ದಿರುವ ಆಡಳಿತಾರೂಢ ಬಿಜೆಪಿ ಪ್ರಯತ್ನಕ್ಕೆ ವಿಪಕ್ಷ ಕಾಂಗ್ರೆಸ್ ಯಾವ ನಡೆ ಅನುಸರಿಸಲಿದೆ ಹಾಗೂ ಪರಿಷತ್ತಿನಲ್ಲಿ ಕಾಂಗ್ರೆಸ್ ಜತೆಗೆ ಇರುವ ಜೆಡಿಎಸ್ ಸದಸ್ಯರ ನಡೆಯೇನು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಸಭಾಪತಿ ಪರವಾಗಿ ನಿಂತಿರುವ ಕಾಂಗ್ರೆಸ್, ಸದನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ತಮ್ಮ ಸದಸ್ಯರಿಗೆ ವಿಪ್ ಜಾರಿ ಮಾಡಿ ಅಖಾಡಕ್ಕೆ ಇಳಿದಿದೆ.
ಇಂದಿನ ಕಲಾಪದ ಕಾರ್ಯಸೂಚಿ ಪಟ್ಟಿಯಲ್ಲಿ ಅವಿಶ್ವಾಸ ನಿರ್ಣಯದ ಪ್ರಸ್ತಾಪವಿಲ್ಲ. ಗೋಹತ್ಯೆ ನಿಷೇಧದ ಮಸೂದೆ ಮತ್ತು ಇತರ ವಿಷಯಗಳು ಸೇರಿವೆ. ಜೆಡಿಎಸ್ ಬೆಂಬಲ ತನಗಿದೆ ಎಂದು ಹೇಳಿಕೊಂಡಿರುವ ಬಿಜೆಪಿ ಅವಿಶ್ವಾಸ ನಿರ್ಣಯದ ನೋಟಿಸ್ ಅನ್ನು ಪ್ರಸ್ತಾಪಿಸುವ ಸಿದ್ಧತೆ ಮಾಡಿಕೊಂಡಿದೆ.
ಗುರುವಾರ ಅಧಿವೇಶನ ಮುಂದೂಡಿದ ಬಳಿಕವಷ್ಟೇ ಸಂವಿಧಾನ ಬದ್ಧವಾಗಿಲ್ಲ ಎಂದು ಅವಿಶ್ವಾಸದ ನೋಟಿಸ್ನ ಕಡತಕ್ಕೆ ಟಿಪ್ಪಣಿ ಬರೆದು ಸಭಾಪತಿ ತಮ್ಮ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಿದರು. ಆವರೆಗೆ ನೋಟಿಸ್ ಪರಿಶೀಲಿಸುವ ಗೋಜಿಗೆ ಅವರು ಹೋಗಿರಲಿಲ್ಲ ಎಂದು ವಿಧಾನಪರಿಷತ್ ಸಚಿವಾಲಯದ ಮೂಲಗಳು ತಿಳಿಸಿವೆ.
ಸದನದ ಬಹುಸಂಖ್ಯಾತ ಸದಸ್ಯರ ವಿಶ್ವಾಸ ಕಳೆದುಕೊಂಡಿರುವ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಒತ್ತಾಯಿಸಿದ್ದಾರೆ.