ಬೀಡನಹಳ್ಳಿ: ತಿ.ನರಸೀಪುರ ತಾಲೂಕು ಬನ್ನೂರು ಹೋಬಳಿಯ ಬೀಡನಹಳ್ಳಿ ಗ್ರಾಮದ ಗ್ರಾಮ ದೇವತೆ ಮಾರಮ್ಮ ಹಬ್ಬ ಇಂದು ಸಡಗರ ಸಂಭ್ರಮದಿಂದ ಜರುಗಿತು.
ಗ್ರಾಮದಲ್ಲಿ ಪ್ರತಿವರ್ಷದಂತೆ ಕಡೆ ಕಾರ್ತಿಕ ಸೋಮವಾರದ ನಂತರ ಜರುಗುವ ವೀರಹಬ್ಬ (ಈರ್ಹಬ್ಬ) ಮಂಗಳವಾರ ಮತ್ತು ಬುಧವಾರ ಗ್ರಾಮದ ಮುಖಂಡರು ಆಯೋಜನೆ ಮಾಡಿದ್ದು, ಅದರಂತೆ ಸಂಭ್ರಮದಿಂದ ಜರುಗಿತು. ಗ್ರಾಮದ ಹೆಂಗಳೆಯರು ಆರತಿ ಯನ್ನು ಹೊತ್ತು ಗ್ರಾಮದೇವತೆ ದೇಗುಲದ ಮುಂದೆ ಜಮಾವಣೆಗೊಂಡು ಆರತಿ ಬೆಳಗಿದರು.
ಬನ್ನೂರು ಹೆಗ್ಗೆರೆಯಿಂದ ಮಂಗಳವಾರ ಸಂಜೆ ಮಜ್ಜನದ ಗಂಗೆ ತಂದು ಪೂಜೆಗಳನ್ನು ಕಟ್ಟಲಾಯಿತು. ಬುಧವಾರ ಮುಂಜಾನೆ ಪೂಜೆಗಳನ್ನು ಹೂ ಹೊಂಬಾಳೆಯಿಂದ ಅಲಂಕರಿಸಿ ಬಾಯಿಬೀಗ ಇರುವವರು ಮಡಿವಂತಿಕೆಯಿಂದ ಒಪ್ಪತ್ತು ಇದ್ದು ಗ್ರಾಮ ದೇವಿಗೆ ಬಾಯಿಬೀಗ ಸೇವೆ ಮಾಡಿ ಹರಕೆ ತೀರಿಸಿದರು.
ಗ್ರಾಮದಲ್ಲಿ ಎರಡು ದಿನಗಳು ಜರುಗಿದ ಹಬ್ಬಕ್ಕೆ ಗ್ರಾಮಸ್ಥರು ಸೇರಿದಂತೆ ಅಕ್ಕಪಕ್ಕ ಗ್ರಾಮಗಳ ನೂರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.