- ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮೂರು ದಿನಗಳ ಹಿಂದೆ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಆದ ಗಲಾಟೆ ಪ್ರಕರಣದ ಕುರಿತು ವಿಧಾನ ಪರಿಷತ್ ಕಾರ್ಯದರ್ಶಿಗೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಶೋಕಾಸ್ ನೋಟಿಸ್ ನೀಡಿದ್ದಾರೆ.
ಡಿ.15ರಂದು ವಿಧಾನಪರಿಷತ್ ಕಲಾಪದ ಲೈವ್ ದೃಶ್ಯಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ನೀವು ಕೂಡ ಉಪ-ಸಭಾಪತಿಗಳು ಬಂದು ಪೀಠದಲ್ಲಿ ಕುಳಿತಾಗ ಅನುವು ಮಾಡಿಕೊಟ್ಟಿರಬಾರದೇಕೆ? ನಿಮಗೆ ಎಲ್ಲಾ ಗಮನಕ್ಕೆ ಬಂದಿದ್ದರೂ ಸುಮ್ಮನಿದ್ದದ್ದು ಏಕೆ? ಈ ಪತ್ರದ ಮೂಲಕ ನೀವು ಮುಂದಿನ 48 ಗಂಟೆಯೊಳಗೆ ಉತ್ತರ ಕೊಡಬೇಕೆಂದು ನೋಟಿಸ್ ಕೊಟ್ಟಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಗಲಾಟೆಯಾಗಿದ್ದು ಏಕೆ? ಸಭಾಪತಿಗಳ ಪೀಠದಲ್ಲಿ ಉಪ ಸಭಾಪತಿಯನ್ನು ಕೂರಲು ಹೇಗೆ ಬಿಟ್ಟಿರಿ? ಸಭಾಪತಿಗಳು ಬಂದು ಪೀಠ ಅಲಂಕರಿಸುವ ಮುನ್ನ ಸದನದ ಸಂಪೂರ್ಣ ಜವಾಬ್ದಾರಿ ನಿಮ್ಮದಾಗಿರುತ್ತದೆ. ಸದನದಲ್ಲಿ ಕೋರಂ ಆಗುವವರೆಗೂ ಸಭಾಪತಿಗಳು ಬರುವುದಿಲ್ಲ. ಇದು ನಿಮಗೆ ಗೊತ್ತಿಲ್ಲವೇ? ನಿಮಗೆ ಸಭಾಪತಿಗಳ ಪೀಠದಲ್ಲಿ ಬೆಲ್ ಆಗುವಾಗ ಯಾರು ಕುಳಿತು ಕೊಂಡಿರಬಾರದು ಎಂಬುದು ಗಮನಕ್ಕೆ ಬರಲಿಲ್ಲವೇ? ಎಂದು ಶೋಕಾಸ್ ನೋಟೀಸ್ನಲ್ಲಿ ಮಾಹಿತಿ ಕೇಳಲಾಗಿದೆ.
ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದ ಬಿಜೆಪಿ ವಿಧಾನ ಪರಿಷತ್ ಸದಸ್ಯರು ಡಿ. 15ರ ಕಲಾಪವನ್ನು ನಡೆಸಲು ಉಪ ಸಭಾಪತಿ ಧರ್ಮೇಗೌಡರನ್ನು ಸಭಾಪತಿ ಪೀಠದಲ್ಲಿ ಕೂರಿಸಿದ್ದರು. ಸಭಾಪತಿಯ ಅನುಮತಿ ಇಲ್ಲದೆ ಉಪ ಸಭಾಪತಿ ಆ ಪೀಠದಲ್ಲಿ ಕೂರುವಂತಿಲ್ಲ ಎಂದು ಕಾಂಗ್ರೆಸ್ ಸದಸ್ಯರು ಧರ್ಮೇಗೌಡರನ್ನು ಪೀಠದಿಂದ ಎಳೆದು, ಗ್ಲಾಸ್ ಅನ್ನು ಪುಡಿಪುಡಿ ಮಾಡಿದ್ದರು. ಸಭಾಪತಿಯನ್ನು ಸದನದೊಳಗೆ ಬಾರದಂತೆ ಬಿಜೆಪಿ ಸದಸ್ಯರು ಬಾಗಿಲು ಹಾಕಿದ್ದರು. ಕಲಾಪದಲ್ಲೇ ಎರಡೂ ಪಕ್ಷದ ಸದಸ್ಯರು ಮೈಕೈ ಮಿಲಾಯಿಸಿ ಹೊಡೆದಾಡಿದ್ದರು. ಬಳಿಕ, ಈ ಪ್ರಕರಣದ ಕುರಿತು ಮಧ್ಯ ಪ್ರವೇಶಿಸುವಂತೆ ಸಿಎಂ ಯಡಿಯೂರಪ್ಪನವರ ತಂಡ ರಾಜ್ಯಪಾಲರಿಗೆ ಮನವಿ ಮಾಡಿತ್ತು.