- ವಿಜಯಪಥ ಸಮಗ್ರ ಸುದ್ದಿ
ಹಾವೇರಿ: ಉಡಗಣಿ, ತಾಳಗುಂದ ಕೆರೆ ತುಂಬಿಸುವ ಯೋಜನೆಯ ಪೈಪ್‍ಲೈನ್ ಅಳವಡಿಸಲು ರೈತರ ಜಮೀನ ಸ್ವಾಧೀನ ವಿರೋಧಿಸಿ ಕಳೆದ ಹದಿನಾಲ್ಕು ದಿನಗಳಿಂದ ರಟ್ಟಿಹಳ್ಳಿಯಲ್ಲಿ ರೈತರು ಕೈಗೊಂಡಿದ್ದ ಸತ್ಯಾಗ್ರಹ ಸ್ಥಳಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಬುಧವಾರ ಭೇಟಿ ನೀಡಿ ಧರಣಿ ನೇತೃತ್ವ ವಹಿಸಿದ ಹಿರಿಯ ವಕೀಲ ಬಿ.ಡಿ.ಹಿರೇಮಠ ಹಾಗೂ ರೈತರೊಂದಿಗೆ ಮಾತನಾಡಿ, ತಮ್ಮ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬೇಡಿಕೆ ಈಡೇರಿಸಲಾಗುವುದು. ಉಪವಾಸ ಸತ್ಯಾಗ್ರಹವನ್ನು ಕೈಬಿಡಿ ಎಂದು ಮನವಿ ಮಾಡಿದರು.
ವಕೀಲ ಬಿ.ಡಿ.ಹಿರೇಮಠ ಅವರು ನನಗೆ 40 ವರ್ಷದಿಂದ ಸ್ನೇಹಿತರು. ಅವರ ಹೋರಾಟದಲ್ಲಿ ನಾನು ಬಾಗೀಯಾಗಿದ್ದೇನೆ. ಹಲವು ಹೋರಾಟ ನಡೆಸಿ ಯಶಸ್ಸು ತಂದಕೊಟ್ಟ ಕೀರ್ತಿ ಅವರದ್ದಾಗಿದೆ. ಅವರು ಕಾನೂನು ತಿಳಿದವರಾಗಿದ್ದು, ನಾವು ನೀವು ಕೂಡಿ ಸಮಸ್ಯೆ ಬಗೆಹರಿಸೋಣ ಎಂದು ಮನವಿ ಮಾಡಿಕೊಳ್ಳಲಾಗಿದೆ. ಅವರ ಪ್ರಮುಖ ಬೇಡಿಕೆಗಳಾದ ತುಂಗಾ ಮೇಲ್ದಂಡೆ ಯೋಜನೆಯಡಿ ರೈತರಿಗೆ ಬಾಕಿ ಇರುವ ಪರಿಹಾರ ಪಾವತಿ ಹಾಗೂ ಉಡಗಣಿ- ತಾಳಗುಂದ ಕೆರೆ ತುಂಬುವ ಯೋಜನೆಯ ಪೈಪ್ ಅಳವಡಿಕೆ ಪರ್ಯಾಯ ಮಾರ್ಗದಲ್ಲಿ ಅಳವಡಿಸಲು ಸಲಹೆ ನೀಡಿದ್ದಾರೆ. ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.
ಉಡತಣಿ-ತಾಳಗುಂದ ಯೋಜನೆಗೆ ರೈತರ ಜಮೀನಿನಲ್ಲಿ ಪೈಪ್ ಅಳವಡಿಸುವ ಬದಲು ಸರ್ಕಾರಿ ಜಮೀನನಲ್ಲಿ ಪೈಪ್‍ಲೈನ್ ಅಳವಡಿಸಿ ನೀರು ತೆಗೆದುಕೊಂಡು ಹೋಗಲು ರೈತರ ಯಾವುದೇ ತಕರಾರು ಇರುವುದಿಲ್ಲ ಹಾಗೂ ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ತಾಲೂಕಿನ ರೈತರಿಗೆ ಬಾಕಿ ಇರುವ ರೂ.154 ಕೋಟಿ ಹಣವನ್ನು ಶೀಘ್ರವೇ ಪಾವತಿಮಾಡಬೇಕು ಎಂಬ ಎರಡು ಬೇಡಿಕೆಗಳನ್ನು ಇಟ್ಟಿದ್ದಾರೆ.
ಕೆರೆ ತುಂಬಿಸುವ ಯೋಜನೆಗೆ ಈಗಿರುವ ಮಾರ್ಗಬದಲಿಸಿ ಪರ್ಯಾಯ ಮಾರ್ಗದಲ್ಲಿ ಪೈಪ್ ಅಳವಡಿಸುವ ಕುರಿತಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಾಂತ್ರಿಕ ವಿಷಯವಾಗಿರುವುದರಿಂದ ಎರಡುಮೂರು ದಿನದಲ್ಲಿ ಅಧ್ಯಯನಮಾಡಿ ವರದಿ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪರ್ಯಾಯ ಮಾರ್ಗದಲ್ಲಿ ಸಾಧ್ಯವಾದರೆ ಪೈಪ್ ಅಳವಡಿಸಲಾಗುವುದು ಎಂದು ಹೇಳಿದರು.
ತುಂಗಾ ಮೇಲ್ದಂಡೆ ಯೋಜನೆಯಡಿ ಅಲ್ಪ ಪರಿಹಾರ ಪಡೆದ ರೈತರು 28ಎ ದಲ್ಲಿ ಹೆಚ್ಚುವರಿ ಪರಿಹಾರ ಪಾವತಿಗೆ ಬಾಕಿ ಇರುವ ರೈತರಿಗೆ ಹಣ ಪಾವತಿಗೆ ಬೇಡಿಕೆ ಸಲ್ಲಿಸಲಾಗಿದೆ. ಭೂಸ್ವಾಧೀನ ಪರಿಹಾರ ಬಹಳ ದಿನಗಳಿಂದ ಇದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ರೆಗ್ಯೂಲರ್ ಭೂಸ್ವಾಧೀನ ಹಾಗೂ ವಿಷಯನ್ನು ಕಾನೂನಾತ್ಮಕವಾಗಿ ಪರಿಶೀಲಿಸಿ ಕ್ರಮಕೈಗೊಳ್ಳಬೇಕಾಗುತ್ತದೆ. ಹಿರಿಯ ಅಧಿಕಾರಿಗಳೊಂದಿಗೆ ಡಿ.21ರಂದು ಬೆಂಗಳೂರಿನಲ್ಲಿ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.