- ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ರೈತರು ಕಳೆದ 22 ದಿನಗಳಿಂದ ಕೇಂದ್ರದ ವಿವಾದಾತ್ಮಕ ಕೃಷಿ ಕಾನೂನಿನ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ ಹೊತ್ತಲ್ಲೇ ಆ ವಿವಾದಾತ್ಮಕ ಮಸೂದೆಯ ಪ್ರತಿಗಳನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹರಿದು ಹಾಕಿದ್ದಾರೆ.
ದೇಶದ ರಾಜಧಾನಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಸಂಬಂಧ ಚರ್ಚಿಸಲು ಕರೆಯಲಾಗಿದ್ದ ದೆಹಲಿ ವಿಶೇಷ ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ ಅವರು, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಕೃಷಿ ಕಾನೂನನ್ನು ಜಾರಿಗೆ ತರುವ ಅವಸರ ಏನಿತ್ತು ಎಂದು ಇದೇ ವೇಳೆ ಕೇಂದ್ರವನ್ನು ಪ್ರಶ್ನಿಸಿದ್ದಾರೆ. ಅಲ್ಲದೇ ಬ್ರಿಟಿಷರಿಗಿಂತ ಕೆಟ್ಟವರಾಗಬೇಡಿ ಎಂದು ಕೇಂದ್ರವನ್ನು ಎಚ್ಚರಿಸಿದ್ದಾರೆ.
ಇನ್ನು ಪ್ರತಿಭಟನೆ ನಡೆಸುತ್ತಿರುವ ಪ್ರತಿಯೊಬ್ಬ ರೈತ ಭಗತ್ಸಿಂಗ್ ಆಗಿದ್ದಾನೆ. ನಾವು ರೈತರ ಪರವಾಗಿದ್ದೇವೆ. ಅವರಿಗೆ ಮಸೂದೆಯ ಲಾಭವನ್ನು ತಿಳಿಸಲು ಪ್ರಯತ್ನಿಸುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ರೈತರಿಂದ ನಿಮ್ಮ ಭೂಮಿಯನ್ನು ಕಸಿದುಕೊಳ್ಳುವುದಿಲ್ಲ. ಇದೇ ನಿಮಗೆ ಲಾಭ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಹೇಳುತ್ತಾರೆ. ಇದೇನಾ ಪ್ರಯೋಜನಾ ಎಂದರೆ ಎಂದು ಇದೇ ವೇಳೆ ಪ್ರಶ್ನಿಸಿದರು.
ಸಿಂಘು ಗಡಿಯಲ್ಲಿ ಕಳೆದವಾರ ಪ್ರತಿಭಟನಾ ನಿರತ ರೈತರನ್ನು ಭೇಟಿಯಾದ ಕೇಜ್ರಿವಾಲ್, ರೈತರ ಬೇಡಿಕೆಯನ್ನು ಬೆಂಬಲಿಸುವುದಾಗಿ ತಿಳಿಸಿದ್ದರು. ಅಲ್ಲದೇ, ರೈತರನ್ನು ರಾಷ್ಟ್ರ ವಿರೋಧಿ ಎಂದು ಟೀಕಿಸಿದ ಕೆಲ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದ ಅವರು, ಮಾಜಿ ಸೈನಿಕರು, ಗಾಯಕರು, ಸೆಲೆಬ್ರಿಟಿಗಳು, ವೈದ್ಯರು, ವ್ಯಾಪಾರಿಗಳು ರೈತರಿಗೆ ಬೆಂಬಲಿಸುತ್ತಿದ್ದಾರೆ. ಇವರು ಕೂಡ ರಾಷ್ಟ್ರ ವಿರೋಧಿಗಳೆ ಎಂದು ಪ್ರಶ್ನಿಸಿದರು.
ಇನ್ನು ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಆಮ್ ಆದ್ಮಿ ಪಕ್ಷ ಬೆಂಬಲ ನೀಡುವುದಾಗಿ ಕಳೆದ ವಾರ ತಿಳಿಸಿತ್ತು. ಅಷ್ಟೇ ಅಲ್ಲದೇ ಪ್ರತಿಭಟನೆಯಲ್ಲಿ ನಿರತರಾಗಿರುವ ಸಾವಿರಾರು ರೈತರಿಗೆ ಮೂಲಭೂತ ಸೌಲಭ್ಯ, ಕುಡಿಯುವ ನೀರು, ಆರೋಗ್ಯ ಸೇವೆ, ಶೌಚಾಲಯ ಒದಗಿಸುತ್ತಿದೆ ಎಂದು ಹೇಳಿದರು.
ಇನ್ನು ಪ್ರತಿಭಟನೆಯಲ್ಲಿ ಭಾಗವಹಿಸಿರುವ ಲಕ್ಷಾಂತರ ರೈತರಿಲ್ಲಿ ಈಗಾಗಲೇ ಚಳಿ ಮತ್ತು ಶೀತದಿಂದಾಗಿ 22ಕ್ಕೂ ಹೆಚ್ಚು ಅನ್ನದಾತರು ಅಸುನೀಗಿದ್ದಾರೆ. ಇವರಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಮತ್ತು ವಿವಾದಿತ ಈ ಮಸೂದೆಯನ್ನು ವಾಪಸ್ ಪಡೆಯಬೇಕು ಎಂದು ಇದೇ ವೇಳೆ ಆಗ್ರಹಿಸಿದರು.