ಕೇಂದ್ರ ಸಚಿವ ಸಂಪುಟ ಪುನರ್ರಚನೆ ಕಸರತ್ತು: 48 ಗಂಟೆಯೊಳಗೆ ಪ್ರಧಾನಿ ಮೋದಿ ಪಡೆಯಲ್ಲಿ ಆಗುತ್ತಾ ಭಾರಿ ಬದಲಾವಣೆ?
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವರ ಖಾತೆ ಬದಲಾವಣೆಯದ್ದೇ ಚರ್ಚೆ. ಜೂನ್ 28 ಅಥವಾ 29 ರಂದು ಪ್ರಧಾನಿ ಮೋದಿ ಅವರು ತಮ್ಮ ಸಚಿವ ಸಂಪುಟದಲ್ಲಿ ತರುತ್ತಾರಾ ದೊಡ್ಡ ಮಟ್ಟದ ಬದಲಾವಣೆ

ನ್ಯೂಡೆಲ್ಲಿ: ದೆಹಲಿಯ ರಾಜಕೀಯ ವಲಯದಲ್ಲಿ ಈಗ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಚಿವ ಸಂಪುಟ ಪುನರ್ರಚನೆಯ ಕುರಿತು ಭಾರಿ ಚರ್ಚೆಗಳು ಆರಂಭವಾಗಿವೆ. ಮೂಲಗಳ ಪ್ರಕಾರ, ಜೂನ್ 28 ಅಥವಾ 29 ರಂದು ಪ್ರಧಾನಿ ಮೋದಿ ಅವರು ತಮ್ಮ ಸಚಿವ ಸಂಪುಟದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳನ್ನು ಮಾಡಲು ಮುಂದಾಗಿದ್ದಾರೆ.
ಈ ಪುನರ್ರಚನೆಯು ಮುಂಬರುವ ಸಾರ್ವತ್ರಿಕ ಚುನಾವಣೆಗಳು ಹಾಗೂ ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಡೆಯುತ್ತಿದೆ ಎಂದೇ ಹೇಳಲಾಗುತ್ತಿದೆ.
ಈ ಬಾರಿಯ ಸಂಪುಟ ಪುನರ್ರಚನೆ ಕಸರತ್ತಿನಲ್ಲಿ ಅತ್ಯಂತ ಗಮನಾರ್ಹ ಬದಲಾವಣೆ ಆಗುತ್ತದೆ ಎಂದು ಹೇಳಲಾಗುತ್ತಿದ್ದು ಪ್ರಮುಖವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವರ ಖಾತೆ ಬದಲಾವಣೆ ಆಗಲಿದೆ ಎಂದು ತಿಳಿದು ಬಂದಿದೆ.
ಇತ್ತೀಚಿನ ಆರ್ಥಿಕ ವಿದ್ಯಮಾನಗಳು ಹಾಗೂ ಪಕ್ಷದ ಆಂತರಿಕ ಕಾರ್ಯತಂತ್ರಗಳ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್ ಅವರಿಗೆ ಶಿಕ್ಷಣ ಸಚಿವಾಲಯದಂತಹ ಬೇರೆ ಮಹತ್ವದ ಜವಾಬ್ದಾರಿ ನೀಡಿ, ಹಣಕಾಸು ಇಲಾಖೆಗೆ ಆರ್‌ಬಿಐ ಮಾಜಿ ಗವರ್ನರ್ ಶಕ್ತಿಕಾಂತ ದಾಸ್ ಅವರಂತಹ ತಜ್ಞರನ್ನು ತರಬಹುದು ಎಂಬ ಚರ್ಚೆಗಳು ಜೋರಾಗಿವೆ.
ಇನ್ನು ಕಳೆದ ಸಂಪುಟದಿಂದ ಹೊರಗುಳಿದಿದ್ದ ಹಿಮಾಚಲ ಪ್ರದೇಶದ ಪ್ರಭಾವಿ ನಾಯಕ ಮತ್ತು ಮಾಜಿ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರಿಗೆ ಮತ್ತೆ ಅದೃಷ್ಟ ಒಲಿಯುವ ಸಾಧ್ಯತೆ ದಟ್ಟವಾಗಿದೆ. ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿರುವ ಅವರಿಗೆ ಈ ಬಾರಿ ಮತ್ತೆ ಸಂಪುಟದಲ್ಲಿ ಪ್ರಮುಖ ಸ್ಥಾನ ನೀಡಲಾಗುವುದು ಎನ್ನಲಾಗುತ್ತಿದ್ದು, ಇದು ಹಿಮಾಚಲ ರಾಜಕಾರಣದಲ್ಲೂ ಸಂಚಲನ ಮೂಡಿಸಿದೆ.
ಬಿಹಾರ ರಾಜಕಾರಣದಲ್ಲೂ ಈ ಪುನರ್ರಚನೆ ಭಾರಿ ಕಂಪನ ಸೃಷ್ಟಿಸುವ ಲಕ್ಷಣಗಳು ಗೋಚರಿಸುತ್ತಿವೆ. ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿ, ಕೇಂದ್ರ ರಾಜಕಾರಣಕ್ಕೆ ಪ್ರವೇಶಿಸಲಿದ್ದಾರೆ ಮತ್ತು ಅವರಿಗೆ ಮೋದಿ ಸಂಪುಟದಲ್ಲಿ ಪ್ರಮುಖ ಸಚಿವ ಸ್ಥಾನ ಸಿಗಲಿದೆ ಎಂಬ ಮಾತು ಎಲ್ಲೆಡೆ ಹರಡಿದ್ದು, ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಮತ್ತಷ್ಟು ಬಲಪಡಿಸಲು ಬಿಜೆಪಿ ಈ ತಂತ್ರಕ್ಕೆ ಕೈಹಾಕಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕೇವಲ ಹಳಬರಷ್ಟೇ ಅಲ್ಲದೆ, ಈ ಬಾರಿ ಸಚಿವ ಸಂಪುಟಕ್ಕೆ ಹೊಸ ಮುಖಗಳನ್ನು ಪರಿಚಯಿಸಲು ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆ. ಆಡಳಿತ ವಿರೋಧಿ ಅಲೆಯನ್ನು ತಡೆಯಲು ಮತ್ತು ಯುವಕರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಹಲವು ಹಿರಿಯ ಸಚಿವರನ್ನು ಕೈಬಿಟ್ಟು, ಉತ್ತರ ಪ್ರದೇಶ, ಬಿಹಾರ ಮತ್ತು ದಕ್ಷಿಣ ಭಾರತದ ರಾಜ್ಯಗಳ ಹೊಸ ಸಂಸದರಿಗೆ ಮಣೆ ಹಾಕಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ನಡೆದ ನೀಟ್ (NEET) ಪೇಪರ್ ಲೀಕ್ ವಿವಾದ ಸೇರಿದಂತೆ ಕೆಲವು ಇಲಾಖೆಗಳ ವೈಫಲ್ಯಗಳ ಹಿನ್ನೆಲೆಯಲ್ಲಿ, ಆಯಾ ಸಚಿವರ ಕಾರ್ಯಕ್ಷಮತೆಯನ್ನು ಆಧರಿಸಿ ಕೆಲವು ಖಾತೆಗಳಿಗೆ ಸರ್ಜರಿ ಮಾಡುವುದು ಅನಿವಾರ್ಯವಾಗಿದೆ. ಜವಾಬ್ದಾರಿಯುತ ಆಡಳಿತ ನೀಡುವ ಸಂದೇಶ ರವಾನಿಸಲು ಪ್ರಧಾನಿ ಮೋದಿ ಈ ಕಠಿಣ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ರಾಜಕೀಯ ತಜ್ಞರು ಊಹಿಸಿದ್ದಾರೆ.
ಒಟ್ಟಾರೆಯಾಗಿ, ಜೂನ್ ಕೊನೆಯ ವಾರದಲ್ಲಿ ನಡೆಯಲಿರುವ ಈ ಸಂಪುಟ ಪುನರ್ರಚನೆಯು ಕೇವಲ ಸಚಿವರ ಬದಲಾವಣೆಯಲ್ಲ, ಬದಲಿಗೆ ಮುಂದಿನ 2029ರ ಲೋಕಸಭಾ ಚುನಾವಣೆಗೆ ಎನ್‌ಡಿಎ ಮೈತ್ರಿಕೂಟವನ್ನು ಸಜ್ಜುಗೊಳಿಸುವ ಮಾಸ್ಟರ್ ಪ್ಲಾನ್ ಆಗಿದೆ.
ರಾಜಕೀಯ ಮೊಗಶಾಲೆಯಲ್ಲಿ ಚರ್ಚೆಯಾಗುತ್ತಿರುವುದು ನಿಜವಾದರೆ ಪ್ರಮುಖ ನಾಯಕರ ಖಾತೆಗಳು ಬದಲಾಗುವುದು ನಿಶ್ಚಿತ, ಹೀಗಾದರೆ ದೇಶದ ರಾಜಕೀಯ ಚಿತ್ರಣವೇ ಬದಲಾಗುವುದರಲ್ಲಿ ಸಂದೇಹವಿಲ್ಲ. ವಿಜಯಪಥಕ್ಕೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಮುಂದಿನ 48 ಗಂಟೆಗಳು ಕೇಂದ್ರ ರಾಜಕಾರಣದಲ್ಲಿ ಅತ್ಯಂತ ನಿರ್ಣಾಯಕವಾಗಿವೆ.







