- ವಿಜಯಪಥ ಗ್ರಾಮದ ಕಥೆವ್ಯಥೆ
ರಾಯಚೂರು: ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆ ರಾಯಚೂರು. ಕೇಂದ್ರ ಸರ್ಕಾರ ಈ ಜಿಲ್ಲೆಯು ಹಿಂದುಳಿದಿದ್ದರಿಂದ ಮಹಾತ್ವಾಕಾಂಕ್ಷಿ ಜಿಲ್ಲೆಯೆಂದು ಘೋಷಿಸಿ ವಿವಿಧ ಯೋಜನೆಗಳನ್ನು ನೀಡುತ್ತಿದೆ. ಇವುಗಳು ಎಷ್ಟು ಪ್ರಮಾಣದಲ್ಲಿ ಅನುಷ್ಠಾನಗೊಳ್ಳುತ್ತವೊ ಗೊತ್ತಿಲ್ಲ.
ಈ ನಡುವೆ ರಾಯಚೂರು ಜಿಲ್ಲೆ ಅತ್ಯಂತ ಹಿಂದುಳಿದಿದೆ ಎಂಬುವುದಕ್ಕೆ ಸಿರವಾರ ತಾಲೂಕಿನ ತುಪ್ಪದೂರು ಒಂದು ಸಾಕ್ಷಿಯಾಗಿದೆ. ಅಂದರೆ ಸಿರವಾರ ತಾಲೂಕಿನ ತುಪ್ಪದೂರು ಕುಗ್ರಾಮಕ್ಕೆ ಇಲ್ಲಿಯವರೆಗೂ ಸರಿಯಾದ ರಸ್ತೆ ಇಲ್ಲ. ಸುಮಾರು 6 ಕಿ.ಮೀ. ದೂರವನ್ನು ಮಣ್ಣಿನ ರಸ್ತೆಯಲ್ಲಿಯೇ ಜನರು ಸಂಚರಿಸಬೇಕು. ಗುಂಡಿ ಬಿದ್ದ, ಡಾಂಬರ್ ಇಲ್ಲದ ಕಚ್ಚಾ ರಸ್ತೆಯಿಂದಾಗಿ ಇಲ್ಲಿಗೆ ಬಸ್ ಸೇವೆ ಈ ಹಿಂದಿನಿಂದಲೂ ಇಲ್ಲ.
ಮೊದಲೇ ಸರಿಯಾದ ರಸ್ತೆ ಇಲ್ಲದ ಕಾರಣ ಇಲ್ಲಿ ಬಸ್ ಸೇವೆ ಬೇಕು ಎಂದು ಕೇಳುವುದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ಸುಮಾರು 650 ಜನಸಂಖ್ಯೆ ಹೊಂದಿರುವ ತುಪ್ಪದೂರಿನಲ್ಲಿ ಯಾರಾದರೂ ಅನಾರೋಗ್ಯಕ್ಕೆ ತುತ್ತಾದರೆ ಅವರಿಗೆ ಚಿಕಿತ್ಸೆ ಕೊಡಿಸಲು ಹರಸಾಹಸ ಪಡಬೇಕು.
ಇನ್ನು ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ತಕ್ಷಣ ಆಸ್ಪತ್ರೆಗೆ ಸೇರಿಸಬೇಕೆಂದರೂ ಸಾಧ್ಯವಾಗದು. ಈ ಸಮಯದಲ್ಲಿ ಎತ್ತಿನ ಬಂಡಿಯಲ್ಲಿಯೇ ಅವರನ್ನು ಕರೆದುಕೊಂಡು ಹೋಗುವ ಅನಿವಾರ್ಯತೆ ಇದೆ. ತುಪ್ಪದೂರಿನಿಂದ ನೀರಮಾನವಿಗೆ 10 ಕಿಮೀ ದೂರ, ಮಾಚನೂರಿಗೆ 6 ಕಿಮೀ ಇದೆ. ತುಪ್ಪದೂರಿನವರು ಮಾಚನೂರುವರೆಗೂ ಇದೇ ಮಣ್ಣಿನ ರಸ್ತೆಯಲ್ಲಿ ಹೋಗಬೇಕು. ಇಂತಹ ಕುಗ್ರಾಮದಲ್ಲಿ ರಸ್ತೆ ಇಲ್ಲದೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಹಲವು ಬಾರಿ ರೋಗಿಗಳು ಮೃತಪಟ್ಟಿರುವ ಪಟ್ಟಿಯೂ ದೊಡ್ಡದೇ ಇದೆ.
ಈ ಗ್ರಾಮದಿಂದ ಮಾಚನೂರಿನಲ್ಲಿರುವ ಪ್ರೌಢಶಾಲೆಗೂ, ಮಾನವಿಯಲ್ಲಿರುವ ಕಾಲೇಜಿಗೆ ಮಕ್ಕಳು ಹೋಗಬೇಕು. ಬಸ್ ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳು ನಡೆದುಕೊಂಡೇ ಶಾಲೆಗೆ ಹೋಗಬೇಕು.
ಕೆಲವರು ಏನೇ ಕಷ್ಟವಾಗಲಿ ಓದಿಸುವ ಆಸೆ ಇದ್ದವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಶಾಲೆ ಕಾಲೇಜಿಗೆ ಕಳುಹಿಸಿದರೆ ಅರ್ಧಕ್ಕಿಂತ ಹೆಚ್ಚು ಜನ ಪ್ರೌಢಶಾಲೆಗೆ ಹೋಗುವ ಮುನ್ನವೇ ಓದಿಗೆ ಗುಡ್ ಬೈ ಹೇಳುತ್ತಿದ್ದಾರೆ.
ಶಾಲೆ, ಕಾಲೇಜಿಗೆ ಗುಡ್ಬೈ ಹೇಳುವುದರಲ್ಲಿ ಹೆಣ್ಣುಮಕ್ಕಳೇ ಹೆಚ್ಚಾಗಿದ್ದು ಈ ಗ್ರಾಮದಲ್ಲಿ ಶಿಕ್ಷಣ ಅಷ್ಟಕಷ್ಟೆ ಎನ್ನುವಂತಾಗಿದೆ. ತುಪ್ಪದೂರಿಗೆ ಸರಿಯಾದ ರಸ್ತೆ ನಿರ್ಮಿಸಿ, ಶಾಲೆ ಕಾಲೇಜು ಸಮಯ ಅಥವಾ ದಿನಕ್ಕೆ ಒಂದೆರಡು ಬಾರಿ ಬಸ್ ಗಳ ಓಡಾಟ ಮಾಡುವಂತೆ ಜಿಲ್ಲಾಡಳಿತಕ್ಕೆ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರೂ ಈ ಗ್ರಾಮಸ್ಥರ ಮನವಿಯನ್ನು ಯಾರು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬುವುದು ಗ್ರಾಮಸ್ಥರು ಆರೋಪ.
ಇನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಮಹಾಂತೇಶ ಪಾಟೀಲರಾಗಲಿ, ಶಾಸಕ ರಾಜಾ ವೆಂಕಟಪ್ಪ ನಾಯಕರಾಗಲಿ, ಸಂಸದ ರಾಜಾ ಅಮರೇಶ್ವರ ನಾಯಕರಾಗಲಿ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಆಗಲಿ ಗ್ರಾಮದ ಸಮಸ್ಯೆಗೆ ಸ್ಪಂದಿಸಿಲ್ಲ.
ಪ್ರತಿ ಚುನಾವಣೆಯ ಸಂದರ್ಭದಲ್ಲಿ ಭರವಸೆ ನೀಡಿ ಮತ ಹಾಕಿಸಿಕೊಂಡು ಗೆದ್ದು ಹೋಗುವ ಜನಪ್ರತಿನಿಧಿಗಳು ಇತ್ತ ಕಣ್ಣೆತ್ತಿ ನೋಡುವುದಿಲ್ಲ. ನಮ್ಮೂರಿಗೆ ರಸ್ತೆಯಾಗುತ್ತದೆ, ನಮ್ಮೂರಿಗೂ ಬಸ್ ಬರುತ್ತೆ ಎಂದು ಕಾಯುವುದು ಈ ಗ್ರಾಮದ ಜನರಿಗೆ ನಿತ್ಯ ಕನಸಾಗಿದೆ. ಇನ್ನಾದರೂ ಕುಗ್ರಾಮವಾಗಿರುವ ಈ ಗ್ರಾಮದ ಅಭಿವೃದ್ಧಿಗೆ ಜನಪ್ರತಿನಿಧಿಗಳು, ಅಧಿಕಾರಿಳು ಸ್ಪಂದಿಸುವರೇ. ಸ್ಪಂದಿಸುತ್ತಾರೆ ಎಂಬ ಆಶಾ ಭಾವನೆಯೊಂದಿಗೆ ಇಂದಿಗೂ ಗ್ರಾಮಸ್ಥರು ದಿನ ದೂಡುತ್ತಿದ್ದಾರೆ.
ಈ ಕುಗ್ರಾಮಕ್ಕೆ ಬಂದು ಮತ ಕೇಳುವ ಅಭ್ಯರ್ಥಿಗಳು ಗೆದ್ದ ಮೇಲೆ ಈ ಗ್ರಾಮವನ್ನೇ ಮರೆಯುವುದು ನಾಚಿಕೆಗೇಡಿನ ಸಂಗತಿ. ಇಂಥ ಲಜ್ಜೆಗೆಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮೊದಲು ನಿತ್ಯ ಇಲ್ಲಿಂದ ನಡೆದುಕೊಂಡು ಹೋಗುವಂತಹ ಶಿಕ್ಷೆಯನ್ನು ನೀಡಬೇಕು. ಆ ನಂತರ ಅವರಿಗೆ ಸಮಸ್ಯೆ ಅರಿವಾಗುವುದೇನೊ ಕಾದು ನೋಡಬೇಕು. ಆಗಲು ಅವರು ಅಸಡ್ಡೆ ತೋರಿದರೆ ಅಂಥ ನೀಚ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳಿಗೆ ಮೂಲಯಲ್ಲಿರುವ ವಸ್ತುವಿನಿಂದ ಸೇವೆ ಮಾಡಬೇಕು.
ಸರಿ ಇನ್ನಾದರೂ ಇತ್ತ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನ ನೀಡುವರೆ ಎಂಬುವುದನ್ನು ಕಾದು ನೋಡಬೇಕಿದೆ.