ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಪ್ರಜಾಪ್ರಭುತ್ವ ಉಳಿಯಬೇಕಾದರೆ ಬಿಬಿಎಂಪಿ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಲಕ್ಷ್ಮಿಕಾಂತ್ ರಾವ್ ಆಗ್ರಹಿಸಿದರು.
ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಪಂಚದ ಅನೇಕ ಮುಂದುವರೆದ ರಾಷ್ಟ್ರಗಳು ಮತ್ತೆ ಮರಳಿ ಬ್ಯಾಲೆಟ್ ಪೇಪರ್ಗೆ ಮರಳಿ ಬಂದಿವೆ ಆದರೂ ನಮ್ಮಲ್ಲಿ ಏಕೆ ಇದು ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.
120 ದೇಶಗಳಲ್ಲಿ ನಿಷೇಧಕ್ಕೆ ಒಳಗಾದ ಇವಿಎಂ ಯಂತ್ರ ನಮ್ಮಲ್ಲಿ ಏಕೆ? ನಾವೇನು ತಂತ್ರಜ್ಞಾನದ ವಿರೋಧಿಗಳಲ್ಲ ಆದರೆ ವ್ಯವಸ್ಥೆಗೆ ಮಾರಕವಾಗುವ ತಂತ್ರಜ್ಞಾನ ನಮಗೆ ಬೇಕೆ ಎನ್ನುವ ಪ್ರಶ್ನೆ ನಮ್ಮದಾಗಿದೆ ಎಂದರು.
ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಧಿಕೃತವಾಗಿ ಎಷ್ಟು ಮತಗಳು ಬಿದ್ದಿವೆ ಎನ್ನುವ ಸ್ಪಷ್ಟ ಅಂಕಿ ಅಂಶವನ್ನು ಕೇಂದ್ರ ಚುನಾವಣಾ ಆಯೋಗ ವರ್ಷಗಳಾಗುತ್ತಾ ಬಂದರೂ ನೀಡಿಲ್ಲ. ಇವಿಎಂ ವಿಶ್ವಾಸಾರ್ಹತೆ ಬಗ್ಗೆ ಈಗಾಗಲೇ ನೂರಾರು ದೂರು ದಾಖಲಾಗಿದೆ, ಇಷ್ಟೇಲ್ಲಾ ಅನುಮಾನದಲ್ಲಿ ಇವಿಎಂ ಮೂಲಕ ಚುನಾವಣೆ ನಡೆಸಬೇಕೆ ಎಂದು ಪ್ರಶ್ನಿಸಿದರು.
ಇವಿಎಂ ಇದೇ ರೀತಿ ಎಲ್ಲಾ ಚುನಾವಣೆಗಳಲ್ಲೂ ಮುಂದುವರೆದರೆ ನಮ್ಮ ದೇಶ ಸರ್ವಾಧಿಕಾರಿಗಳ ಹಿಡಿತಕ್ಕೆ ಹೋಗುವುದರಲ್ಲಿ ಅನುಮಾನವೇ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದರು.