ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಗೋಮಾಂಸ ತಿನ್ನುವುದೇ ಮೈಸೂರು ಮುಖಂಡನ ಸಾಧನೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಆದರೆ ನಾನು ಈವರೆಗೆ ಗೋಮಾಂಸವನ್ನುತಿಂದಿಲ್ಲ. ಜನರ ದುಡ್ಡು ತಿಂದು ಜೈಲಿಗೆ ಹೋಗೋದೇ ಶಿವಮೊಗ್ಗ ಮುಖಂಡನ ಸಾಧನೆ ಎಂದು ಹೇಳಿಕೊಳ್ಳಲು ಅವರು ಯಾಕೋ ಮರೆತಿದ್ದಾರೆ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಬಿಜೆಪಿವರು ಒಂದು ಕಡೆ ವಿಶ್ವಮಾನವರಾಗಿ ಅಂತನೂ ಹೇಳ್ತಾರೆ, ಇನ್ನೊಂದು ಕಡೆ ಕುರಿ, ಕೋಳಿ, ಗೋಮಾಂಸ ತಿನ್ನುವವರ ವಿರುದ್ಧ ದ್ವೇಷವನ್ನೂ ಕಾರುತ್ತಾರೆ. ವಿಶ್ವಮಾನವನಾಗುವುದು ಎಂದರೆ ಪ್ರತಿ ವ್ಯಕ್ತಿಯ ಸಂಸ್ಕೃತಿ, ಆಹಾರ, ಆಚರಣೆಗಳನ್ನು ಗೌರವಿಸಿ, ಅವರಿದ್ದಂತೆ ಅವರನ್ನು ಒಪ್ಪಿಕೊಳ್ಳುವುದು ಇದನ್ನು ಮರೆದ್ದಾರೆ ಎಂದಿದ್ದಾರೆ.
ನಮ್ಮ ಪಕ್ಷದ ಶಾಸಕರನ್ನು ಖರೀದಿಸಿ ಅವರ ಬಲದಿಂದ ಅಧಿಕಾರ ಅನುಭವಿಸುತ್ತಿರುವ ಯಡಿಯೂರಪ್ಪ ಅವರು ಕಾಂಗ್ರೆಸ್ ಪಕ್ಷಕ್ಕೆ ನಾಯಕರಿಲ್ಲ ಎಂದು ಹೇಳುತ್ತಿರುವುದು ತಮಾಷೆಯಾಗಿದೆ. ಸ್ವಂತಬಲದಲ್ಲಿ ಚುನಾವಣೆ ಗೆದ್ದು ಪೂರ್ಣಾವಧಿ ಸರ್ಕಾರ ನಡೆಸಿದ್ದು ಕಾಂಗ್ರೆಸ್ ಪಕ್ಷ. ಅವರೇನಾದರೂ ಒಂದೈದು ಪೂರ್ತಿ ವರ್ಷ ಮುಖ್ಯಮಂತ್ರಿಯಾಗಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಕಳೆದ 48 ದಿನಗಳಿಂದ ದೆಹಲಿಯಲ್ಲಿ ರೈತರು ಮಳೆ, ಚಳಿ, ಹಸಿವು ಯಾವುದನ್ನೂ ಲೆಕ್ಕಿಸದೆ ಬೀದಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಅವರ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಾ ಬಂದಿರುವ
ಪ್ರಧಾನಿ ನರೇಂದ್ರ ಮೋದಿ ಅವರ ಹಠಮಾರಿ ಧೋರಣೆಯೇ ರೈತರ ಎಲ್ಲ ಕಷ್ಟ-ನಷ್ಟಗಳಿಗೆ ನೇರ ಕಾರಣ ಎಂದಿದ್ದಾರೆ.
ಸುಪ್ರೀಂ ಕೋರ್ಟ್ ಕೇಂದ್ರದ ನೂತನ ಕೃಷಿ ಕಾಯ್ದೆಗಳಿಗೆ ತಡೆ ನೀಡಿದೆಯೆಂದರೆ ಆ ಮಸೂದೆಗಳು ಸಂವಿಧಾನಕ್ಕೆ ವಿರುದ್ಧವಾಗಿವೆ ಎಂದರ್ಥ. ಅದೇ ನ್ಯಾಯಾಲಯ ರೈತರಿಗೆ ಪ್ರತಿಭಟನೆ ಮುಂದುವರಿಸಲು ಅವಕಾಶ ಕಲ್ಪಿಸಿ ತೀರ್ಪು ನೀಡಿದೆ ಎಂದರೆ ಅವರ ಬೇಡಿಕೆಗಳು ನ್ಯಾಯಬದ್ಧವಾಗಿವೆ ಎಂದರ್ಥ ಎಂದು ಹೇಳಿದ್ದಾರೆ.
ಎಚ್. ವಿಶ್ವನಾಥ್ ಅವರು ತಮಗೆ ಲೋಕಸಭೆಗೆ ಟಿಕೆಟ್ ಕೊಡಿಸಿದ್ದು, 2008ರಲ್ಲಿ ವಿಧಾನಸಭೆಗೆ ಟಿಕೆಟ್ ಕೊಡಿಸಿದ್ದು ಯಾರು ಎಂಬುದನ್ನು ನೆನಪು ಮಾಡಿಕೊಂಡು ಹೇಳಲಿ, ಆ ಮೇಲೆ ನನ್ನ ವಿರುದ್ಧ ಮಾತನಾಡಲಿ. ಕೃತಜ್ಞತೆ ಇಲ್ಲದೆ ಇರುವ ಕಾರಣಕ್ಕೆ ಯಡಿಯೂರಪ್ಪ ಅವರೂ ಇವರನ್ನು ಮಂತ್ರಿ ಮಾಡಿಲ್ಲ ಎಂದು ವಿಶ್ವನಾಥ್‌ಗೂ ಕುಟುಕಿದ್ದಾರೆ.