ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಒಟ್ಟು 1,38,656 ಮಂದಿಗೆ ಕೊರೊನಾ ಲಸಿಕೆ ನೀಡಿದ್ದು, ಕೆಲವರಿಗೆ ಮಾತ್ರ ಅಡ್ಡ ಪರಿಣಾಮವಾಗಿದೆ. ಯಾರೂ ಮರಣ ಹೊಂದಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಸಿಕೆ ಪಡೆದರೆ ಕೋವಿಡ್ ನಿಂದ ದೂರವಿರಬಹುದು. ಕೆಲ ತಪ್ಪು ಮಾಹಿತಿಗಳಿಂದ ಅಂಜಿಕೆ ಉಂಟಾಗಿದೆ. 2 ನೇ ಹಂತದಲ್ಲಿ ರಾಜ್ಯದ ಒಂದೂವರೆಯಿಂದ ಎರಡು ಕೋಟಿ ಜನರಿಗೆ ಲಸಿಕೆ ನೀಡಬೇಕಾಗುತ್ತದೆ. ಇದು ಬಹುದೊಡ್ಡ ಸವಾಲು ಎಂದರು.
ಇನ್ನು ಈಗಾಗಲೇ 1,36,882 ಮಂದಿಗೆ ಕೋವಿಶೀಲ್ಡ್, 1,774 ಮಂದಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿದೆ. ಈ ಪೈಕಿ ಶೇ.2 ರಿಂದ 3.5 ಜನರಿಗೆ ಸ್ವಲ್ಪ ಅಡ್ಡಪರಿಣಾಮ ಉಂಟಾಗಿದೆ. 8,47,908 ಮಂದಿ ಲಸಿಕೆ ಪಡೆಯಲು ಹೆಸರು ನೋಂದಾಯಿಸಿಕೊಂಡಿದ್ದರು. ಇದರಲ್ಲಿ 3,27,201 ಸರ್ಕಾರಿ ಆರೋಗ್ಯ ಸಿಬ್ಬಂದಿ, 4,45,389 ಖಾಸಗಿ ಆರೋಗ್ಯ ಸಿಬ್ಬಂದಿ ಇದ್ದಾರೆ. ಒಟ್ಟು 7,72,591 ಆರೋಗ್ಯ ಸಿಬ್ಬಂದಿ ಇದ್ದಾರೆ. ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದವರು 75,318 ಮಂದಿ ಇದ್ದಾರೆ. ಕೋವ್ಯಾಕ್ಸಿನ್ ನ 1,46,240 ಡೋಸ್ ಇಂದು ಬರಲಿದೆ ಎಂದರು.
ಇನ್ನು ಖಾತೆ ಹಂಚಿಕೆ ಮುಖ್ಯಮಂತ್ರಿಗಳ ಪರಮಾಧಿಕಾರ. ಅವರೇನು ಮಾಡಬೇಕಿತ್ತು ಎಂದು ಹೇಳಲು ಸಾಧ್ಯವಿಲ್ಲ. ಅವರ ತಂಡ ಸದಸ್ಯನಾಗಿ ಅವರಿಗೆ, ಸರ್ಕಾರಕ್ಕೆ, ಪಕ್ಷಕ್ಕೆ ಒಳ್ಳೆಯ ಹೆಸರು ತರಲು ಆತ್ಮವಂಚನೆ ಮಾಡಿಕೊಳ್ಳದೆ ಕೆಲಸ ಮಾಡುತ್ತಿದ್ದೇನೆ ಎಂದರು.
ಮೊದಲು ಇಲಾಖೆಗಳು ಬೇರೆಯಾಗಿದ್ದರಿಂದ ಕೋವಿಡ್ ನಿರ್ವಹಣೆ ಸಮಸ್ಯೆಯಾಗಿತ್ತು. ನಂತರ ಒಂದೇ ಇಲಾಖೆ ಆಗಿದ್ದರಿಂದ ಕೋವಿಡ್ ನಿಯಂತ್ರಣಕ್ಕೆ ಬಂತು. ಲಸಿಕೆ ಬಂದ ಬಳಿಕ ಎರಡೂ ಇಲಾಖೆಗಳ ಸಂಯೋಜನೆ ಮೂಲಕ ಹೆಚ್ಚಿನ ಜನರಿಗೆ ತಲುಪಿಸಬೇಕಿದೆ. ಆಡಳಿತ ವೈಫಲ್ಯದಿಂದ ಸಮಸ್ಯೆಯಾಗಬಾರದು. ಜನರ ಹಿತದೃಷ್ಟಿಯಿಂದ ಎರಡೂ ಇಲಾಖೆಗಳನ್ನು ಒಬ್ಬರಿಗೇ ನೀಡಬೇಕು ಎಂದು ಸಿಎಂ ಜತೆ ನೇರವಾಗಿ ಮಾತನಾಡಿ ಮನವಿ ಮಾಡುತ್ತೇನೆ. ಕೋವಿಡ್‌ನ 2ನೇ ಅಲೆ ಬಂದರೆ ಇಂತಹ ಸಿದ್ಧತೆ ಅಗತ್ಯ ಎಂದರು.
ಇನ್ನು ತುಮಕೂರಿನಲ್ಲಿ ವೈದ್ಯಾಧಿಕಾರಿಗಳು ಮೊದಲೇ ಲಸಿಕೆ ಪಡೆದಿದ್ದರು, ನಂತರ ಛಾಯಾಚಿತ್ರಕ್ಕಾಗಿ ಕೇಳಿದಾಗ ಲಸಿಕೆ ಪಡೆದಂತೆ ಮಾಡಲಾಗಿದೆ. ಇದರಲ್ಲಿ ಲೋಪವಿಲ್ಲ ಎಂದು ಸ್ಪಷ್ಟಪಡಿಸಿದರು.