ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಗಣರಾಜ್ಯೋತ್ಸವ ದಿನವಾದ ಜ.26ರಂದು ರಾಜ್ಯದಲ್ಲೂ ಸಹ ಬೆಂಗಳೂರಿನಲ್ಲಿ ಅನ್ನದಾತರು ಹೋರಾಟಕ್ಕಿಳಿಯಲಿದ್ದಾರೆ.
ಈ ಹಿನ್ನೆಯಲ್ಲಿ ಇಂದು ಸಂಜೆ ವೇಳೆಗೆ ಮೈಸೂರು ಭಾಗದ ಸಾವಿರಾರು ರೈತರು ತಮ್ಮ ವಾಹನಗಳ ಜತೆ ಬೆಂಗಳೂರಿನ ಹೊರವಲಯ ತಲುಪಿ ನಾಳೆ ಬೆಳಗ್ಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ನಾಳೆ ಪೊಲೀಸರಿಗೆ ಒಂದು ಕಡೆ ಗಣರಾಜ್ಯೋತ್ಸವ ಸಮಾರಂಭದ ಭದ್ರತೆ ಇನ್ನೊಂದೆಡೆ ರೈತರ ಪ್ರತಿಭಟನೆಯ ಬಿಸಿ ನಿವಾರಿಸುವ ಜವಾಬ್ದಾರಿ ಇದೆ.
ಇನ್ನು ಹಲವು ರೈತ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದು, ಅಂದು ಮುಂಜಾನೆಯೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ರೈತರೂ ಜಮಾಯಿಸಲಿದ್ದಾರೆ. ರಾಜ್ಯದ ನಾನಾ ಮೂಲೆಗಳಿಂದ ಆಗಮಿಸುವ ರೈತರು ಒಂದೆಡೆ ಸೇರಿ ಬಳಿಕ ಪ್ರತಿಭಟನೆ ನಡೆಸಲಿದ್ದಾರೆ.
ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ವರೆಗೂ ಪ್ರತಿಭಟನಾ ಮೆರವಣಿಗೆ ಸಾಗಲಿದೆ. ಸಾವಿರಾರು ರೈತರು ಸೇರುತ್ತಿರುವ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲು ಖಾಕಿ ಪಡೆ ಸಜ್ಜಾಗಿದೆ. 2 ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ರೈಲ್ವೆ ನಿಲ್ದಾಣದಲ್ಲಿ ಮುಂಜಾನೆಯೇ ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ರೈತರು ಎಷ್ಟು ಸಂಖ್ಯೆಯಲ್ಲಿ ಬರುತ್ತಾರೆ ಎಂದು ನೋಡಿಕೊಂಡು ಇನ್ನಷ್ಟು ಭದ್ರತೆ ನೀಡಲು ನಿರ್ಧರಿಸಲಾಗಿದೆ.
ಪ್ರತಿಭಟನೆಗೆ ಬರೋ ರೈತರು ಟ್ರ್ಯಾಕ್ಟರ್ ಮೂಲಕ ಬರುವ ಹಾಗಿಲ್ಲ. ಟ್ರಾಫಿಕ್ ಜಾಮ್ ಆಗುತ್ತದೆಂದು ಬೆಂಗಳೂರು ಪೊಲೀಸರು ಟ್ರ್ಯಾಕ್ಟರ್ ರ‍್ಯಾಲಿಗೆ ಅನುಮತಿ ನೀಡಿಲ್ಲ. ಟ್ರ್ಯಾಕ್ಟರ್ ಬಿಟ್ಟು ಬೇರೆ ವಾಹನಗಳಲ್ಲಿ ಪ್ರತಿಭಟನೆಗೆ ಪಾಲ್ಗೊಳ್ಳಬಹುದು ಎಂದು ಪೊಲೀಸರು ಹೇಳಿದ್ದಾರೆ.
ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆಗೆ ಬಿಟ್ಟರೆ ಮುತ್ತಿಗೆಗೆ ಅವಕಾಶ ಇಲ್ಲ. ವಿಧಾನಸೌಧ ಮುತ್ತಿಗೆಗೆ ಯತ್ನಿಸಿದರೆ ಅಂತಹವರನ್ನು ಪೊಲೀಸರು ಬಂಧಿಸಲಿದ್ದಾರೆ. ಮಹಾರಾಣಿ ಕಾಲೇಜು ಮುಂದೆಯೇ ಬ್ಯಾರಿಕೇಡ್ ಹಾಕಿ ಭದ್ರತೆ ವಹಿಸಲಾಗುತ್ತದೆ. ಪ್ರತಿಭಟನೆಗೆ ವಾಹನಗಳಲ್ಲಿ ಬರುವವರುಫ್ರೀಡಂ ಪಾರ್ಕ್ ಬಳಿಯೇ ನಿಲುಗಡೆಗೆ ಅವಕಾಶವಿದೆ.
ನಾಳೆ ಎಲ್ಲೆಲ್ಲಿ ಟ್ರಾಫಿಕ್ ಜಾಮ್?
ಮೆಜೆಸ್ಟಿಕ್- ಆನಂದ್ ರಾವ್ ಸರ್ಕಲ್ – ಮಹಾರಾಣಿ ಕಾಲೇಜು ರಸ್ತೆಗಳನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ.
ಮೆಜೆಸ್ಟಿಕ್ ಮೂಲಕ ಹೋಗುವ ವಾಹನಗಳು ಆನಂದ್ ರಾವ್ ಸರ್ಕಲ್- ಹಳೇ ಜೆಡಿಎಸ್ ಆಫೀಸ್ – ರೇಸ್ ಕೋರ್ಸ್ – ವಿಧಾನಸೌಧ – ಸಿಐಡಿ ಕಚೇರಿ ಮಾರ್ಗವಾಗಿ ಕಾರ್ಪೋರೇಷನ್ ತಲುಪುವಂತೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.ಪ್ರತಿಭಟನೆ ಮುಗಿಯೋವರೆಗೂ ಮೆಜೆಸ್ಟಿಕ್ – ಮಹಾರಾಣಿ ಕಾಲೇಜು ರಸ್ತೆ ಸಂಪೂರ್ಣ ಬಂದ್ ಆಗಲಿದೆ.