ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮಕ್ಕಳನ್ನು ಶಾಲೆಗೆ ಕಳುಹಿಸಲು ಆಗದೆ ಒದ್ದಾಡುತ್ತಿರುವ ಪೋಷಕರು, ಸರ್ಕಾರದಿಂದ ಯಾವುದೇ ರೀತಿಯ ಸಹಾಯ ದೊರೆಯುತ್ತಿಲ್ಲ ಎಂದು ಆರೋಪಿಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು, ಕೆಲಸ ಕಳೆದುಕೊಂಡು ಕಂಗಾಲಾಗಿರುವ ಶಾಲಾ ಶಿಕ್ಷಕರು, ಬೋಧಕೇತರ ಸಿಬ್ಬಂದಿ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಕಾಣದ ಶಿಕ್ಷಣ ಮಂತ್ರಿ “ಎಲ್ಲಿದ್ದೀರಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೇ” ಶೀಘ್ರ ಸಮಸ್ಯೆ ಬಗೆಹರಿಸಿ ಎಂದು ಆಮ್ ಆದ್ಮಿ ಪಕ್ಷದ ಮುಖ್ಯ ವಕ್ತಾರ ಶರತ್ ಖಾದ್ರಿ ಆಗ್ರಹಿಸಿದರು.
ಮಂಗಳವಾರ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ, ಪೋಷಕರ ವಿರುದ್ಧ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು, ಶಿಕ್ಷಣ ಸಂಸ್ಥೆಗಳ ವಿರುದ್ಧ ಪೋಷಕರನ್ನು ಎತ್ತಿಕಟ್ಟುವ ಬದಲು ಸಮಸ್ಯೆ ಬಗೆಹರಿಸಿ, ಮೌನ ಮುರಿಯಿರಿ ಎಂದರು.
ಜನರ ಆದಾಯ ಕುಸಿದು ಹೋಗಿದೆ ಹಾಗೂ ಸಣ್ಣ, ಸಣ್ಣ ಶಿಕ್ಷಣ ಸಂಸ್ಥೆಗಳು ಸಾಲದ ಸುಳಿಯಲ್ಲಿ ಸಿಲುಕಿವೆ ಇಂತಹ ಸಂಸ್ಥೆಗಳ ನೆರವಿಗೆ ನಿಲ್ಲಿ, ಸಬ್ಸಿಡಿ ಘೋಷಿಸಿ ಎಂದು ಸಲಹೆ ನೀಡಿದರು.
ಸರ್ಕಾರಿ ಶಾಲೆಗಳೂ ಮೂಲ ಸೌಕರ್ಯಗಳಿಲ್ಲದೆ ಸೊರಗುತ್ತಿವೆ, ಖಾಸಗಿ ಶಾಲೆಗಳ ಶುಲ್ಕ ಗಗನಕ್ಕೇರಿದೆ ಈ ಸಂಘರ್ಷದಲ್ಲಿ ಮಕ್ಕಳು ಬಡವಾಗುತ್ತಿದ್ದಾರೆ, ಎಲ್ಲಿದ್ದೀರಿ ಬನ್ನಿ ಸಮಸ್ಯೆ ಬಗೆಹರಿಸಿ ಸುರೇಶ್ ಕುಮಾರ್ ಅವರೇ ಎಂದು ಒತ್ತಾಯಿಸಿದರು.
ಸಂಪಂಗಿರಾಮನಗರ ವಾರ್ಡ್ ಅಧ್ಯಕ್ಷ ಪ್ರಕಾಶ್ ನೆಡುಂಗಡಿ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳು ವಿವಿಧ ಸೌಲಭ್ಯಗಳ ಹೆಸರಿನಲ್ಲಿ ವಸೂಲಿ ಮಾಡುತ್ತಿರುವ ಶುಲ್ಕಗಳ ಬಗ್ಗೆ ಸರ್ಕಾರದಿಂದ ಏನಾದರೂ ನೀತಿ- ನಿರ್ದೇಶನವಿದೆಯೇ? ಉತ್ತರಿಸುವಿರಾ ಎಂದರು.
ಶುಲ್ಕ ಕಟ್ಟಲು ಆಗದ ಮಕ್ಕಳನ್ನು ಇತರೇ ಮಕ್ಕಳ ಎದುರು ಅವಮಾನಿಸಲಾಗುತ್ತಿದೆ, ಖಾಸಗಿ ಶಿಕ್ಷಣ ಸಂಸ್ಥೆಯೊಂದು ಇಡೀ ದಿನ ಫೀ ಕಟ್ಟದ ಮಕ್ಕಳನ್ನು ತರಗತಿಯಿಂದ ಹೊರಗೆ ನಿಲ್ಲಿಸಿದೆ, ಇದು ಪುಟ್ಟ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವುದಲ್ಲದೆ ಭವಿಷ್ಯದಲ್ಲಿ ಸಾಕಷ್ಟು ತೊಂದರೆಗೆ ಕಾರಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಂಪಂಗಿರಾಮ ನಗರ ವಾರ್ಡ್ ಅಧ್ಯಕ್ಷ ಪ್ರಕಾಶ್ ನೆಡುಂಗಡಿ ಇದ್ದರು.