ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದಲ್ಲಿ 5 ಕೋಟಿ ರೂ. ಡೀಲ್ ನಡೆದಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಅವರು, ಕಳೆದ ಮೂರು ತಿಂಗಳಿನಿಂದ ಈ ಡೀಲ್ ವ್ಯವಹಾರ ನಡೆದಿದೆ. ಇದರಲ್ಲಿ ದೊಡ್ಡ ದೊಡ್ಡವರ ಕೈವಾಡವಿದೆ. ಹೀಗಾಗಿ ಇದನ್ನು ತನಿಖೆ ಮಾಡಿಸುವ ಜವಾಬ್ದಾರಿ ಸರಕಾರದ್ದು. ನಾನು ಈ ಪ್ರಕರಣ ನೋಡಿ ಖುಷಿ ಪಡುವವನಲ್ಲ. ಸರ್ಕಾರನ್ನು ಬೀಳಿಸಿದವರು ಎನ್ನುವ ಕಾರಣಕ್ಕೆ ನಾನು ಒಂದು ಕಲ್ಲು ಹೊಡೆಯಬೇಕು ಅಂತ ಹೊಡೆಯೋದಿಲ್ಲ ಎಂದರು.
ರಾಜಕಾರಣಿಗಳ ಸಿಡಿ ಇದೆ ಎಂದು ಹೇಳಿ ಬ್ಲಾಕ್ಮೇಲ್ ಮಾಡುತ್ತಿರುವವರನ್ನು ಹೊದ್ದು ಏರೋಪ್ಲೇನ್ ಹತ್ತಿಸಿ, ಅವರನ್ನು ಬಂಧಿಸಿ, ಅವರ ಬಳಿ ಇರುವ ಸಿಡಿಗಳನ್ನು ಸರ್ಕಾರವೇ ಜನರ ಮುಂದೆ ಬಿಡುಗಡೆ ಮಾಡಲಿ ಎಂದು ಕುಮಾರಸ್ವಾಮಿ ಹೇಳಿದರು.
ಸಿಡಿ ಇದೆ ಎಂದು ಕೆಲವರು ಬ್ಲಾಕ್ಮೇಲ್ ಮಾಡುತ್ತಿದ್ದಾರೆ ಇದು ಬ್ಲಾಕ್ಮೇಲ್ ಕಾರ್ಯತಂತ್ರ. ಇದಕ್ಕೆ ಪುಷ್ಟಿಕೊಟ್ಟು ಬೆಳೆಸಬೇಡಿ. ಅದ್ಯಾರೋ ಒಬ್ಬ ಮಾಜಿ ಮುಖ್ಯಮಂತ್ರಿ ಅದೆಲ್ಲೋ ಹೋಗಿಬರುತ್ತಾರೆ ಅವರ ಸಿಡಿ ನನ್ನ ಬಳಿ ಇದೆ ಎಂದು ಹೇಳುತ್ತಾನೆ. ರಾಜ್ಯದಲ್ಲಿ ದೇವೇಗೌಡ, ಎಸ್ಎಂ ಕೃಷ್ಣ ಹಾದಿಯಾಗಿ ತುಂಬಾ ಜನ ಮಾಜಿ ಸಿಎಂಗಳು ಇದ್ದಾರೆ.
ಆದರೆ ಆ ಎಲ್ಲೋ ಹೋದ ಮಾಜಿ ಸಿಎಂ ಯಾರು ಎಂದು ಬಾಯಿ ಬಿಡಿಸಿ. ಸುಮ್ಮನೆ ನಾವು ಹೊರಗೆ ಓಡಾಡುವಾಗ ಮುಜುಗರ ತರಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ.
ಹಿಂದೆ ಅದ್ಯಾವುದೋ ಆಂಕರ್ ವಿಚಾರದಲ್ಲೂ ನನ್ನ ಹೆಸರು ತಂದರು. ಆಗಲು ಸರಿಯಾಗಿ ಜೋಡಿಸಿದ್ದೇನೆ. ನನಗೆ ಈ ವಿಚಾರದಲ್ಲಿ ಯಾವುದೇ ಭಯವೂ ಇಲ್ಲ. ಈ ಪ್ರಕರಣದಲ್ಲಿ ನಾವು ತುಂಬಾ ಕ್ಲೀನಾಗಿ ಇದ್ದೇವೆ. ಆದರೆ ನನ್ನ ಉದ್ದೇಶ ಇಂತಹ ಬ್ಲಾಕ್ಮೇಲ್ ಗಳು ನಿಲ್ಲಬೇಕು. ಇಂತಹ ಪ್ರಕರಣಗಳು ಹೇಸಿಗೆ ಹುಟ್ಟಿಸುವಂತಹ ಸ್ಥಿತಿ ನಿರ್ಮಾಣ ಮಾಡಿವೆ ಎಂದು ಕಿಡಿಕಾರಿದರು.