ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಎಚ್‌ಎಸ್‌ಆರ್ ಲೇಔಟ್ ಮತ್ತು ಅಗರ ವಾರ್ಡಿನ ಹೃದಯ ಭಾಗದಲ್ಲಿರುವ ಆಟದ ಮೈದಾನದಲ್ಲಿ ಗುತ್ತಿಗೆದಾರರ ಲಾಬಿಗೆ ಮಣಿದು ಬೃಹತ್ ಕ್ರೀಡಾ ಸಂಕೀರ್ಣ ನಿರ್ಮಿಸುತ್ತಿರುವ ಬಿಬಿಎಂಪಿ ನಿರ್ಧಾರ ವಿರೋಧಿಸಿ. ಈ ಕೂಡಲೇ ಕಾಮಗಾರಿ ನಿಲ್ಲಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ನಾಗರಿಕರ ಬೆಂಬಲದೊಂದಿಗೆ ಶನಿವಾರ ಆಮ್ ಆದ್ಮಿ ಪಕ್ಷ ಬೃಹತ್ ಪ್ರತಿಭಟನೆ ನಡೆಸಿತು.
ಈ ವೇಳೆ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸೀತಾರಾಂ ಗುಂಡಪ್ಪ ಮಾತನಾಡಿ, ಸುತ್ತಮುತ್ತಲಿನ ಸಾವಿರಾರು ಜನರಿಗೆ ಈ ಆಟದ ಮೈದಾನ ಬಹಳ ಉಪಯುಕ್ತವಾಗಿದೆ. ಎಲ್ಲರೂ ಮುಕ್ತವಾಗಿ ಇದನ್ನು ಬಳಸುತ್ತಿದ್ದಾರೆ. ಇಂತಹ ಆಟದ ಮೈದಾನವನ್ನು ಕೆಲವೇ ಕೆಲವು ಮಂದಿಗಳ ಕೈಯಿಗೆ ಕೊಡಲು ಹೊರಟಿರುವ ಬಿಬಿಎಂಪಿ, ಕಮಿಷನ್ ಆಧಾರದಲ್ಲಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಈ ಕ್ರೀಡಾ ಸಂಕೀರ್ಣ ನಿರ್ಮಾಣದಲ್ಲಿ ಸಂಪೂರ್ಣವಾಗಿ ತನ್ನದೇ ನಿಯಮಗಳನ್ನು ಬಿಬಿಎಂಪಿ ಮುರಿಯುತ್ತಿದೆ. ಒಂದು ಮಹಡಿ ಕಟ್ಟುವ ಕಡೆ, 5ಕ್ಕಿಂತ ಹೆಚ್ಚು ಮಹಡಿಗಳ ನಿರ್ಮಾಣದಲ್ಲಿ ತೊಡಗಿದೆ. ವಾಣಿಜ್ಯ ಉದ್ದೇಶಕ್ಕೆ ಕಟ್ಟಡ ಬಳಸಬಾರದು ಎಂದಿದ್ದರೂ ವಾಣಿಜ್ಯ ಉದ್ದೇಶಕ್ಕೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಶೇ. 5 ರಷ್ಟು ಜಾಗವನ್ನು ಮುಕ್ತ ಬಳಕೆಗೆ ಮೀಸಲಿಡಬೇಕು ಎನ್ನುವ ನಿಯಮವನ್ನು ಮುರಿಯಲಾಗಿದೆ ಎಂದು ಕಾರಿದರು.
ಒಟ್ಟಿನಲ್ಲಿ ಗುತ್ತಿಗೆದಾರರ ಲಾಬಿಗೆ ಮಣಿದು ಈ ಅವೈಜ್ಞಾನಿಕ ಹಾಗೂ ಅವಶ್ಯಕತೆ ಇಲ್ಲದ ಕಾಮಗಾರಿ ನಡೆಸುತ್ತಿದೆ. ಸ್ಥಳೀಯ ಶಾಸಕ ಸತೀಶ್ ರೆಡ್ಡಿ ಅವರು ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡು ಕ್ರೀಡಾಂಗಣ ನಿರ್ಮಾಣ ಆಗಲೇ ಬೇಕು ಎಂದು ನಿಂತಿದ್ದಾರೆ.
ಯಾರ ಉದ್ದಾರಕ್ಕೆ ಈ ಸಂಕೀರ್ಣ ಎಂದು ಅವರು ತಿಳಿಸಬೇಕು. ಈ ಕಾಮಗಾರಿ ನಡೆಸುವ ಕುರಿತು ಸ್ಥಳೀಯರ ಅಭಿಪ್ರಾಯವನ್ನೂ ಕೂಡ ಸಂಗ್ರಹಿಸದೆ ಹಾಗೂ ಸಲಹೆ, ಸೂಚನೆಗಳನ್ನು ಪರಿಗಣಿಸದೆ ಇಂತಹ ನಿರ್ಧಾರ ತೆಗೆದುಕೊಂಡಿರುವ ಬಿಬಿಎಂಪಿ ಈ ಕೂಡಲೇ ಹಿಂದೆ ಸರಿಯಬೇಕು ಹಾಗೂ ಕ್ರೀಡಾಂಗಣವನ್ನು ಎಲ್ಲರ ಬಳಕೆಗೆ ಮುಕ್ತವಾಗಿರಿಸಬೇಕು ಎಂದು ಆಗ್ರಹಿಸಿದರು.
ಅಗರ ವಾರ್ಡಿನ ಅಧ್ಯಕ್ಷೆ ಪಲ್ಲವಿ ಚಿದಂಬರ, ಬಿಳಕೇನಹಳ್ಳಿ ವಾರ್ಡ್ ಅಧ್ಯಕ್ಷೆ ಸಬೀಹಾ, ಮಹಿಳಾ ಘಟಕದ ಅಧ್ಯಕ್ಷೆ ಆಯಿಷಾ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.