ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ತಾಲೂಕಿನ ಬಹುದೊಡ್ಡ ಗ್ರಾಮ ಪಂಚಾಯಿತಿ ಮತ್ತು ಪ್ರಮುಖ ವಾಣಿಜ್ಯ ಕೇಂದ್ರವಾದ ಕಂಪಲಾಪುರ ಗ್ರಾಮ ಪಂಚಾಯಿತಿಯನ್ನು ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವುದಾಗಿ ಸಂಸದ ಪ್ರತಾಪ್ ಸಿಂಹ ಭರವಸೆ ನೀಡಿದರು.
ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ಶುಕ್ರವಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ 14 ಮತ್ತು 15 ಹಣಕಾಸು ಯೋಜನೆಯ ಅನುದಾನದಡಿ ನೂತನವಾಗಿ ನಿರ್ಮಿಸಿದರುವ ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ನಾನು ಸಂಸದನಾದ ನಂತರ ಮೈಸೂರು ಜಿಲ್ಲೆಯಲ್ಲಿ ಅನೇಕ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿದ್ದು ಪಿರಿಯಾಪಟ್ಟಣ ತಾಲೂಕಿನ ಗಡಿ ಗ್ರಾಮವಾದ ಕಂಪಲಾಪುರವು ಹೆಚ್ಚಿನ ಜನಸಂಖ್ಯೆ ಮತ್ತು ಪ್ರಮುಖ ವಾಣೀಜ್ಯ ಕೇಂದ್ರವಾಗಿದ್ದು ಇಲ್ಲಿ ಜನಸಂದಣಿ ಹೆಚ್ಚಾಗಿರುವ ಕಾರಣ ಕಂಪಲಾಪುರವನ್ನು ಪಟ್ಟಣ ಪಂಚಾಯಿತಿಯಾಗಿ ಮಾಡುತ್ತೇನೆ ಎಂದರು.
ಮೈಸೂರು-ಕುಶಾಲನಗರ ರೈಲ್ವೆ, ಬೈಪಾಸ್ ರಸ್ತೆಗೆ ಶೀಘ್ರದಲ್ಲಿ ಭೂಮಿಪೂಜೆ
ರೂ.3.120 ಕೋಟಿ ವೆಚ್ಚದಲ್ಲಿ ನಾಲ್ಕು ಫಥದ ರಸ್ತೆಯನ್ನು ಶ್ರೀರಂಗಪಟ್ಟಣದಿಂದ ಗುಂಗ್ರಾಲ್ ಛತ್ರ ಮುಖಾಂತರ ಕಟ್ಟೆಮಳವಾಡಿಯ ಮೂಲಕ ಕಳಬೆಟ್ಟ ಮಾರ್ಗವಾಗಿ ಪಿರಿಯಾಪಟ್ಟಣಕ್ಕೆ ಬಂದು ಆ ಮೂಲಕ ಕೊಡಗು ಜಿಲ್ಲೆಯ ಗುಡ್ಡೆಹೊಸೂರಿನ ವರೆಗೆ ರಸ್ತೆ ನಿರ್ಮಿಸಲು ಯೋಜನೆ ರೂಪಿಸಿ ಈಗಾಗಲೇ ಅನುದಾನ ಬಿಡುಗಡೆ ಮಾಡಲಾಗಿದೆ ಸದ್ಯದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು.
ಅದೇ ರೀತಿ ಮೈಸೂರಿನಿಂದ ಕುಶಾಲನಗರದ ವರೆಗೆ 87 ಕೀ.ಮೀ ರೈಲ್ವೇ ಹಳಿ ನಿರ್ಮಾಣ ಮಾಡಲು ರೂ.1874 ಕೋಟಿ ಅನುದಾನವನ್ನು ಈಗಾಗಲೇ ಕೇಂದ್ರ ಸರ್ಕಾರ ಬಿಡುಗಡೆ ಮಾಡಿತ್ತು ಹಿಂದಿನ ರಾಜ್ಯ ಸರ್ಕಾರ ಭೂಮಿ ನೀಡದ ಕಾರಣ ವಿಳಂಬವಾಗಿತ್ತು. ಈಗಿನ ಸರ್ಕಾರ ಭೂಮಿ ಮಂಜೂರು ಮಾಡಲು ಸಿದ್ದವಾಗಿದೆ. ಆದರೆ ಕೊರೊನಾ ಸಮಸ್ಯೆ ಹಾಗೂ ಹಣಕಾಸಿನ ಮುಗ್ಗಟ್ಟಿನಿಂದ ಸ್ವಲ್ಪ ತಡವಾಗುತ್ತಿದ್ದು ಇದನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಶಾಸಕ ಕೆ.ಮಹದೇವ್ ಮಾತನಾಡಿದರು. ತಾಪಂ ಇಒ ಶ್ರುತಿ, ಎಡಿ ರಘುನಾಥ್, ಅಧ್ಯಕ್ಷೆ ನಿರೂಪ, ಸ್ಥಾಯಿ ಸಮಿತಿ ಅಧ್ಯಕ್ಷ ರಂಗಸ್ವಾಮಿ, ಗ್ರಾ.ಪಂ. ಪಿಡಿಒ ಪರಮೇಶ್, ಕಾರ್ಯದರ್ಶಿ ಸುಷ್ಮಾ, ಲೆಕ್ಕ ಸಹಾಯಕಿ ಸುಮಿತ್ರ, ಅಧ್ಯಕ್ಷೆ ರಾಣಿ ಉಪಾಧ್ಯಕ್ಷ ರಾಮಲಿಂಗಂ, ನಾಜಿ ಅಧ್ಯಕ್ಷ ಆಸೀಫ್ ಖಾನ್, ಮಾಜಿ ಉಪಾದ್ಯಕ್ಷೆ ಕುಮಾರಿ, ಸೇರಿದಂತೆ ಮತ್ತಿತರರು ಇದ್ದರು.