ವಿಜಯಪಥ ವಿಶೇಷ
ಬನ್ನೂರು: ಬೀಡನಹಳ್ಳಿಯ ಶ್ರೀ ನಂದಿ ಬಸವೇಶ್ವರ ಸ್ವಾಮಿಯ 9ನೇ ಬಂಡಿ ಮತ್ತು ಕೊಂಡೋತ್ಸವ ಮಾ.14 ಮತ್ತು 15ರಂದು ನಡೆಯಲಿದೆ.
ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ, ಬನ್ನೂರು ಹೋಬಳಿಯ ಬೀಡನಹಳ್ಳಿ ಗ್ರಾಮದಲ್ಲಿ ಮಾ.14ರಂದು ಬಂಡಿ ಮಹೋತ್ಸವ ನಡೆಯಲಿದ್ದು, ಮೊಳ್ಳೆ ಕೆಂಪಣ್ಣನವರ ಕುಟುಂಬ ಮತ್ತು ದೊಡ್ಡನಿಂಗಯ್ಯನವರ ಕುಟುಂಬದವರು ಬಂಡಿಗೆ ತಮ್ಮ ಎತ್ತುಗಳನ್ನು ಕಟ್ಟಿ ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಿ ಬಂಡಿ ಉತ್ಸವಕ್ಕೆ ಚಾಲನೆ ನೀಡುವರು. ನಂತರ ಇತರರು ಬಂಡಿ ಓಡಿಸಬಹುದು. ಇನ್ನು ಮಾ.15ರಂದು ಕೊಂಡೋತ್ಸವ ನೆರವೇರಲಿದೆ.
ಈಗಾಗಲೇ ಬೀಡನಹಳ್ಳಿ ಗ್ರಾಮಸ್ಥರು ಕೊಂಡೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾ.14ರಂದು ಕೊಂಡೋತ್ಸವಕ್ಕೆ ಚನ್ನೇಗೌಡನವರ ಕುಟುಂಬ ಕೊಂಡ ತೆಗೆಯಲಿದ್ದು, ಶಂಭೇಗೌಡನ ಕುಟುಂಬದವರು ಸೌದೆ (ಕಟ್ಟಿಗೆ) ತರಲಿದ್ದಾರೆ. ಭಾನುವಾರ ರಾತ್ರಿ 10 ಗಂಟೆ ನಂತರ ಅರ್ಚಕ ಪುಟ್ಟಮಾದಪ್ಪ ಅವರ ಮನೆಯಿಂದ ಮಂಗಳವಾದ್ಯಗಳೊಂದಿಗೆ ನಂದಿ ಬಸವೇಶ್ವರ ಸ್ವಾಮಿಯ ಬಸವನೊಂದಿಗೆ ಗ್ರಾಮದ ಮುಖಂಡರು ಮೆರವಣಿಗೆ ಮೂಲಕ ಹೋಗಿ ಬೆಂಕಿ ತಂದು ಕೊಂಡಕ್ಕೆ ಸ್ಪರ್ಶ ಮಾಡುವರು.
ನಂತರ ರಂಗಬೆಟ್ಟಯ್ಯನ ಕುಟುಂಬದವರು ಕೊಂಡವನ್ನು ಹದ ಮಾಡುವರು. ಗುಳ್ಳಯ್ಯನ ನಿಂಗಪ್ಪ, ಬೆಟ್ಟೇಗೌಡರ ಕುಟುಂಬ ಕೊಂಗ ಹೊಡೆಯಬೇಕು ( ಕೆಂಡಕ್ಕೆ ಗಾಳಿ ಬೀಸುವುದು). ಮುಂಜಾನೆ ಆರು ಗಂಟೆಯೊಳಗೆ ಕಾಶಿ ವೇಷಧಾರಿ ದೇವಸ್ಥಾನದ ಅರ್ಚಕ ಮಹದೇವಸ್ವಾಮಿ ಕೊಂಡ ಹಾಯುವರು. ನಂತರ ಶ್ರೀ ಸ್ವಾಮಿಯ ಗುಡ್ಡಪ್ಪನವರಾದ ನಂಜುಂಡೇಗೌಡ ಮತ್ತು ರಾಜೇಶ ಅವರು ಕೊಂಡ ಹಾಯಲಿದ್ದಾರೆ. ಕೊಂಡೋತ್ಸವ ಆದ ಒಂದು ವಾರದ ಬಳಿಕ ಬೆಟ್ಟೇಗೌಡನ ಮನೆಯವರು ಕೊಂಡ ಮುಚ್ಚುವರು.
ಅರ್ಚಕರು ಕೊಂಡ ಹಾಯುವ ಮುನ್ನ ದೇಸ್ಥಾನದ ಬಾಗಿಲಿಗೆ ಕೆಂಡ ಎರಚಿ ಸಾವಿರಾರು ಭಕ್ತರ ನಡುವೆ ವೇದಘೋಷಗಳು ಮೊಳಗುತ್ತವೆ. ಭಾನುವಾರ ರಾತ್ರಿ ಪೂರ ವಿವಿಧ ಸಾಂಸ್ಕೃತಿಕ, ಜಾನಪದ ಕಾರ್ಯಕ್ರಮಗಳನ್ನು ಗ್ರಾಮದ ಎಸ್ಸಿ ಕಾಲನಿಯ ಜಾನಪದ ಕಲಾವಿದರೊಂದಿಗೆ ಸೇರಿ ಇತರರು ನಡೆಸಿಕೊಡಲಿದ್ದಾರೆ.
ಗ್ರಾಮಸ್ಥರ ನಿತ್ಯ ಆರಾಧ್ಯ ದೈವ
ನಂಬಿದ ಭಕ್ತರು ಬೇಡುವ ವರವನ್ನು ದಯಪಾಲಿಸುವ ಮೂಲಕ ಲಕ್ಷಾಂತರ ಭಕ್ತರ ನಂಬಿಕೆಯ ದೈವವಾಗಿರುವ ಬೀಡನಹಳ್ಳಿ ಗ್ರಾಮದ ಶ್ರೀ ನಂದಿ ಬಸವೇಶ್ವರ ಸ್ವಾಮಿ ಸುತ್ತಮುತ್ತಲ ಗ್ರಾಮಸ್ಥರ ನಿತ್ಯ ಆರಾಧ್ಯ ದೇವರು.
ಕಾವೇರಿ ನದಿ ದಂಡೆಯ ಸ್ವಚ್ಛ ಪರಿಸರಹೊಂದಿರುವ ಗ್ರಾಮದಲ್ಲಿ ಶತಶತಮಾನಗಳಷ್ಟು ಹಳೆಯದಾದ ಶ್ರೀಸ್ವಾಮಿಯ ದೇವಾಲಯದಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಹಲವು ಸಮಸ್ಯೆಗಳಿಗೆ ಸಿಲುಕಿರುವ ಭಕ್ತರ ನೋವು ನೀಗಿಸುವ ತಾಲೂಕಿನ ಏಕೈಕ ದೈವ ಶ್ರೀಸ್ವಾಮಿ ಎಂಬುವುದು ಭಕ್ತರ ನಂಬಿಕೆ. ದೇವಾಲಯಕ್ಕೆ ಬೆಂಗಳೂರು, ಮೈಸೂರು, ಹಾಸನ, ಕೋಲಾರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬರುವ ಭಕ್ತರು ಹರಕೆ ಮಾಡಿಕೊಂಡು ಕಷ್ಟ ಪರಿಹಾರವಾದ ಬಳಿಕ ಹರಕೆ ತೀರಿಸುತ್ತಾರೆ.
ಬೆಲೆಬಾಳುವ ವಸ್ತುಗಳನ್ನು ಹರಕೆ ರೂಪದಲ್ಲಿ ನೀಡಬೇಕಿಲ್ಲ
ಅಂದಹಾಗೆ ಹಣ ಒಡವೆ ಹೀಗೆ ಬೆಲೆಬಾಳುವ ವಸ್ತುಗಳನ್ನು ದೇವಾಲಯಕ್ಕೆ ಭಕ್ತರು ಹರಕೆ ರೂಪದಲ್ಲಿ ನೀಡಬೇಕಿಲ್ಲ. ಶ್ರೀಸ್ವಾಮಿಗೆ ಆರ್ಥಿಕ ಶಕ್ತಿಗೆ ಅನುಸಾರವಾಗಿ ಹರಕೆ ಮಾಡಿಕೊಂಡು ದೊಡ್ಡಪರ ಇಲ್ಲವೇ ಚಿಕ್ಕಪರವನ್ನು (ಚಿಕ್ಕಪರ ಎಂದರೆ ಶಿವರಾತ್ರಿ ಬಳಿಕ ಸೋಮವಾರ ಮತ್ತು ಶುಕ್ರವಾರಗಳಲ್ಲಿ ರಾತ್ರಿ ವೇಳೆ 8 ರಿಂದ 10ಸಾವಿರ ಭಕ್ತರಿಗೆ ಅನ್ನದಾಸೋಹ ಮಾಡುವುದು. ದೊಡ್ಡ ಪರ ಸೋಮವಾರ ಇಲ್ಲ ಶುಕ್ರವಾರದಂದು ಬೆಳಗ್ಗೆ 8ರಿಂದ ರಾತ್ರಿ 7 ಗಂಟೆ ವರೆಗೆ ಅನ್ನದಾಸೋಹವನ್ನು ದೇಗುಲದ ಆವರಣದಲ್ಲಿ ನೆರವೇರಿಸುವುದು). ಮಾಡಬೇಕು. ಇದಲ್ಲದೆ ಪ್ರತಿ ಸೋಮವಾರ ಮತ್ತು ಶುಕ್ರವಾರ ಮೊಸರನ್ನ ಅಥವಾ ಪುಳಿಯೋಗರೆ ಮಾಡಿಸಿ ನೂರಾರು ಭಕ್ತರಿಗೆ ಪ್ರಸಾದ ವಿತರಿಸಲಾಗುತ್ತದೆ.
ಬಂಜೆತನ ನಿವಾರಣೆ ಎಂಬ ನಂಬಿಕೆ
ವೈಜ್ಞಾನಿಕವಾಗಿ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಚಿಕಿತ್ಸೆಗೆ ಒಳಪಟ್ಟರೂ ಮಕ್ಕಳಾಗದೇ ಬಂಜೆತನದಿಂದ ಬಳಲಿ ಜೀವನದಲ್ಲಿ ನಿರಾಸೆಗೊಂಡು, ಮಾನಸಿಕವಾಗಿ ಕುಗ್ಗಿರುವ ಅನೇಕ ಮಂದಿ ಶ್ರೀಸ್ವಾಮಿ ಸನ್ನಿಧಿಗೆ ಬಂದು ಮಕ್ಕಳ ವರ ಕೇಳಿ ಹರಕೆ ಮಾಡಿಕೊಂಡು ಹೋಗುತ್ತಾರೆ. ಇಷ್ಟೇ ಅಲ್ಲದೇ ದೆವ್ವ, ಭೂತ, ಪೀಡೆ, ಪಿಶಾಚಿಗಳಿಂದ ಬಳಲುವವರು ಶ್ರೀಸ್ವಾಮಿ ಸನ್ನಿಧಿಗೆ ಬರುತ್ತಾರೆ. ಇಲ್ಲಿಗೆ ಬರುವ ನೂರಾರು ಭಕ್ತರ ಕಾಯಿಲೆ ವಾಸಿಯಾಗಿದೆ. ಅಷ್ಟರ ಮಟ್ಟಿಗೆ ಈ ಸ್ಥಳದ ಮಹಿಮೆ ಇದೆ.
ಗ್ರಾಮಕ್ಕೆ ಹಂದಿಗಳ ಪ್ರವೇಶವಿಲ್ಲ
ಶ್ರೀ ನಂದಿ ಬಸವೇಶ್ವರ ಸ್ವಾಮಿ ಬೀಡನಹಳ್ಳಿ ಗ್ರಾಮ ಸೇರಿ ಸುತ್ತ ಮುತ್ತಲ ಹತ್ತಾರು ಗ್ರಾಮಗಳ ಜನರ ಆರಾಧ್ಯ ದೈವ. ಶ್ರೀಸ್ವಾಮಿಯ ಪ್ರಮುಖವಾದ ಒಂದು ಪ್ರತೀತಿ ಇದೆ. ಅದೆಂದರೆ ಗ್ರಾಮಕ್ಕೆ ಹಂದಿಗಳು ಬರುವುದಿಲ್ಲ. ಒಂದು ವೇಳೆ ಬಂದರೆ ಅವು ದೇವಸ್ಥಾನದ ಹಿಂಭಾಗವಾಗಲಿ ಅಥವಾ ಮುಂಭಾಗವಾಗಲಿ ಹೋದರೆ ಗ್ರಾಮದ ಎಲ್ಲೆಯಿಂದ ಹೊರಹೋಗುತ್ತಿದ್ದಂತೆ ಸತ್ತು ಹೋಗುತ್ತವೆ ಎಂಬ ಭಯ ಈಗಲು ಇದೆ. ಆದ್ದರಿಂದಲೇ ಇಂದಿಗೂ ಕೂಡ ಗ್ರಾಮಕ್ಕೆ ಹಂದಿಗಳ ಪ್ರವೇಶವಿಲ್ಲ. ಅಲ್ಲದೇ ಗ್ರಾಮದ ನಿವಾಸಿಗಳು ಹಂದಿ ಮಾಂಸ ತಿಂದರೆ ಮುಖ, ಕೈ-ಕಾಲು ಊದಿಕೊಳ್ಳುವ ಜತೆಗೆ ವಿಚಿತ್ರ ರೋಗಕ್ಕೆ ತುತ್ತಾಗಿ ನರಳಿ ನರಳಿ ಸಾಯುತ್ತಾರೆ ಎಂದು ಗ್ರಾಮದ ಹಿರಿಯರು ವಿವರಿಸುತ್ತಾರೆ.
ದೀಪಾವಳಿಯಲ್ಲಿ ಮಾಂಸ ನಿಷೇಧ
ಬೀಡನಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದ ಮೊದಲ ಕಾರ್ತಿಕ ದೀಪವನ್ನು ಶ್ರೀನಂದಿ ಬಸವೇಶ್ವರ ದೇವಾಯದಲ್ಲಿ ಹಚ್ಚುವ ಮುನ್ನ ಮಾಂಸ ಆಹಾರವನ್ನು ಮನೆಗಳಲ್ಲಿ ಮಾಡಬಹುದು. ಶ್ರೀಸ್ವಾಮಿ ಸನ್ನಿಧಿಯಲ್ಲಿ ದೀಪ ಹಚ್ಚಿದ ನಂತರ ಕಡೆಯ ಕಾರ್ತಿಕ ಸೋಮವಾರದವರೆಗೆ ಅಂದರೆ ಒಂದು ತಿಂಗಳ ಕಾಲ ಮಾಂಸ ಆಹಾರವನ್ನು ಮನೆಯಲ್ಲಿ ಯಾರು ಮಾಡುವುದಿಲ್ಲ.