ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ವೈಯಕ್ತಿಕ ಲಾಭ, ಉದ್ದೇಶಗಳಿಗೆ ಸರ್ಕಾರ ನಡೆಸುತ್ತಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದಿಂದ ಜನಸಾಮಾನ್ಯರ ಏಳಿಗೆ ಕಷ್ಟ. ನಮ್ಮ ದೇಶದ ಬದಲಾವಣೆ ಬೆಂಗಳೂರಿನಿಂದ ಪ್ರಾರಂಭವಾಗಲಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ಜಯನಗರ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷ ಕಚೇರಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಇಡೀ ದೇಶ ವಿಚಿತ್ರವಾದ ಸಂಕಷ್ಟದಲ್ಲಿ ಸಿಲುಕಿದೆ, ಇಂತಹ ಹೊತ್ತಿನಲ್ಲೂ ದಿನ ಬಳಕೆ ವಸ್ತುಗಳ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸೇರಿದಂತೆ ಅನೇಕ ವಸ್ತುಗಳು ಜನ ಸಾಮಾನ್ಯರಿಗೆ ದಕ್ಕದಂತಾಗಿವೆ. ಇಷ್ಟೆಲ್ಲಾ ಸಂಕಷ್ಟಗಳಿದ್ದರೂ ವೈಯಕ್ತಿಕ ಲಾಭ ಮಾಡಿಕೊಳ್ಳುವತ್ತ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ನಿಂತಿರುವುದು ನೋವಿನ ಸಂಗತಿ ಎಂದರು.
ಬೆಂಗಳೂರಿನ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯೂ ಪಕ್ಷದ ಕಚೇರಿ ತೆರೆಯುತ್ತಿದ್ದು, ಜನರನ್ನು ತಲುಪಲು ಜನಸಭೆ, ಮನೆ- ಮನೆ ಸಭೆಗಳನ್ನು ಆಯೋಜಿಸಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ
ವೈಫಲ್ಯಗಳನ್ನು ತಿಳಿಸುವ ಸಲುವಾಗಿ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಮಾತನಾಡಿ, ಗುಜರಾತ್, ಗೋವಾ, ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ಇಡೀ ದೇಶದಾದ್ಯಂತ ಪಸರಿಸುತ್ತಿದೆ. ದಕ್ಷಿಣ ಭಾರತದಲ್ಲಿ ಬೆಂಗಳೂರು ಆಮ್ ಆದ್ಮಿ ಪಕ್ಷಕ್ಕೆ ಹೆಬ್ಬಾಗಿಲಾಗಲಿದೆ ಎಂದರು.
ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ವಿಧಾನಸಭಾ ಕ್ಷೇತ್ರ ವೀಕ್ಷಕ ಡಾ. ವಿಶ್ವನಾಥ್ ಉಪಸ್ಥಿತರಿದ್ದರು.