ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ಭ್ರಷ್ಟಾಚಾರ ಮತ್ತು ಕುಟುಂಬ ರಾಜಕೀಯದ ವಿರುದ್ಧ ನನ್ನ ಹೋರಾಟ ನಿರಂತರವಾಗಿರಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ಸಿಎಂ ಮಾತ್ರವಲ್ಲ ಅವರ ಇಡೀ ಕುಟುಂಬ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ. ಅಧಿಕಾರಿಗಳು ನೌಕರರ ವರ್ಗಾವಣೆ ಮುಖ್ಯಮಂತ್ರಿ ಮನೆಯಿಂದಲೇ ಆಗುವುದು. ಈ ವರ್ಗಾವಣೆ ಸಿಎಂ ಕುಟುಂಬದಿಂದಲೇ ಆಗಬೇಕು ಅಷ್ಟು ಭ್ರಷ್ಟಾಚಾರದಲ್ಲಿ ಕುಟುಂಬ ತೊಡಗಿದೆ ಎಂದು ಗಂಭೀರ ಆರೋಪ ಮಾಡಿದರು.
ನಾನು ಯಾರ ಏಜೆಂಟು ಅಲ್ಲ. ಬಿಜೆಪಿ ಕಾರ್ಯಕರ್ತ. ಪ್ರಧಾನಿ ನರೇಂದ್ರ ಮೋದಿ ಬೆಂಬಲಿಗ. ಇನ್ನು ಯಾರ ಪರವಾಗಿಯಾದರು ನಿಲ್ಲಲು ನನಗೆ ಹೆಚ್ಚು ಹಿಡಿದಿದೆಯ ಎಂದು ಕೇಳಿದರು.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ನೀಡಿರುವುದರಿಂದ ನ್ಯಾಯ ಸಿಗಲ್ಲ. ಮುಖ್ಯಮಂತ್ರಿ ಮತ್ತು ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರು ಹೇಳಿದಂತೆ ನಡೆಯುವ ತಂಡ ಅದು. ಹೀಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸುತ್ತೇನೆ ಎಂದರು.
ಸಿಡಿ ಹಿಂದೆ ಕೇವಲ ಕಾಂಗ್ರೆಸ್ ನಾಯಕರು ಮಾತ್ರವಲ್ಲ ಬಿಜೆಪಿ ನಾಯಕರ ಕೈವಾಡವೂ ಇರಬಹುದು ಎಂದು ಆರೋಪಿಸಿದ ಯತ್ನಾಳ್, ಪತ್ರಕರ್ತನ ಮಗಳ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಕೇವಲ ಕಾಂಗ್ರೆಸ್ ಮುಖಂಡರು ಮಾತ್ರವಲ್ಲ ಬಿಜೆಪಿ ನಾಯಕರು ಹೋಗಿರುವ ಫೋಟೋಗಳನ್ನು ಬಿಡುಗಡೆ ಮಾಡುವ ಮೂಲಕ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.