ವಿಜಯಪಥ ಸಮಗ್ರ ಸುದ್ದಿ
ಚಿತ್ರದುರ್ಗ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ನೌಕರರ ಶೇ. 90 ರಷ್ಟು ಬೇಡಿಕೆಗಳನ್ನು ಈಡೇರಿಸಿದ್ದೇವೆ. ಆದರೂ ಸಹ ಏ.7ರಂದು ಪ್ರತಿಭಟನೆಗೆ ಮುಂದಾಗಿರುವುದು ಆಶ್ಚರ್ಯಕರವಾಗಿದೆ ಎಂದುಸಾರಿಗೆ ಸಚಿವ ಮತ್ತು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಬಸಾಪುರ ಗೇಟ್ ಬಳಿ ಸಮಾಜ ಕಲ್ಯಾಣ ಇಲಾಖೆ ಮತ್ತು ಕೆಎಸ್ಆರ್ಟಿಸಿ ವತಿಯಿಂದ ನಿರ್ಮಿಸಿರುವ ಚಾಲಕರ ತರಬೇತಿ ಕೇಂದ್ರ ಹಾಗೂ ನೂತನ ಬಸ್ ಘಟಕದ ಶಂಕುಸ್ಥಾಪನೆಯ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಸಾರಿಗೆ ಸಂಸ್ಥೆ ಬದುಕಿದರೆ ಸಿಬ್ಬಂದಿ ಬದುಕುವರು. ಆದರೆ ಸಿಬ್ಬಂದಿ ಮುಂದಿನ ತಿಂಗಳ 7ರಂದು ಪ್ರತಿಭಟನೆ ಮಾಡುವುದಾಗಿ ನೋಟಿಸ್ ನೀಡಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಹಾಗೂ ನಮ್ಮೆಲ್ಲರಿಗೂ ತೊಂದರೆಯಾಗಲಿದೆ ಇದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.
ಸಿಬ್ಬಂದಿಯ 10 ಬೇಡಿಕೆಗಳಲ್ಲಿ 9 ಬೇಡಿಕೆ ಈಡೇರಿಸುವುದಾಗಿ ತಿಳಿಸಿದ್ದೆವು. ಅದರಲ್ಲಿ 8 ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದೆ. 9ನೇ ಬೇಡಿಕೆಯಾದ ಆರನೇ ವೇತನ ಅಯೋಗದ ಶಿಫಾರಸು ಜಾರಿಗೆ ತರುವುದು ಬಾಕಿ ಇದ್ದು, ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ನಿರ್ಣಯ ಮಾಡಲಿದ್ದೇವೆ ಎಂದು ತಿಳಿಸಿದರು.
ಇನ್ನು ಕೊರೊನಾ ಸಂಷ್ಟದ ನಡುವೆಯೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಿಂದ ಒಂದು ವರ್ಷದಲ್ಲಿ 3 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಹೇಳಿದರು.
ಆದರೂ ಕೋವಿಡ್ ಸಮಯದಲ್ಲಿ ಸಿಬ್ಬಂದಿ ವೇತನಕ್ಕಾಗಿ ಸರ್ಕಾರದಿಂದ 1,900 ಕೋಟಿ ರೂ. ಪಡೆದು ವೇತನ ನೀಡಲಾಗಿದೆ. ಸಿಬ್ಬಂದಿ ವೇತನದಲ್ಲಿ ಯಾವುದೇ ಕಡಿತ ಮಾಡದೆ ಹಣ ಸಂದಾಯ ಮಾಡಲಾಗಿದೆ. ಇಷ್ಟೆಲ್ಲಾ ಮಾಡಿದರೂ ಸಹ ಸಿಬ್ಬಂದಿ ಇತ್ತೀಚಿಗೆ ಪ್ರತಿಭಟನೆ ಮಾಡಿದರು. ಇದರಿಂದ ನಾನು ಹಾಗೂ ನಮ್ಮ ಸರ್ಕಾರ ಟೀಕೆಗೆ ಒಳಗಾಗಬೇಕಾಯಿತು ಎಂದರು.
ಪೆಟ್ರೋಲ್ ಬಂಕ್ ನಿರ್ಮಿಸುವ ಯೋಜನೆ
ಸಾರಿಗೆ ಇಲಾಖೆ ವತಿಯಿಂದ ಪೆಟ್ರೋಲ್ ಬಂಕ್ ನಿರ್ಮಿಸುವ ಯೋಜನೆಯೂ ಇದೆ. ಇನ್ನು ಮುಂದಿನ ದಿನಗಳಲ್ಲಿ 4 ನಿಗಮಗಳನ್ನು ನಷ್ಟದಿಂದ ಹೊರಗೆ ತರುತ್ತೇನೆ. ಇತ್ತೀಚಿಗೆ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಕಾರ್ಗೋ ಸೇವೆಯನ್ನು ಆರಂಭಿಸಿದ್ದು, ಇದರಿಂದ 200 ಕೋಟಿ ಲಾಭ ಗಳಿಸುವ ಗುರಿ ಇದೆ ಎಂದು ವಿವರಿಸಿದರು.
2600 ಕೋಟಿ ರೂ. ವಿದ್ಯಾರ್ಥಿಗಳ ಬಸ್ ಪಾಸ್ನ ಅನುದಾನದ ಬಂದಿಲ್ಲ
ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಉಚಿತ ನೀಡಲಾಗಿದೆ. ಶೇ.75 ರಿಯಾಯಿತಿ ಯಲ್ಲಿ ಇತರೆ ವಿದ್ಯಾರ್ಥಿಗಳಿಗೆ ಬಸ್ಪಾಸ್ ನೀಡುತ್ತಿದ್ದೇವೆ. ಸರ್ಕಾರದಿಂದ ಸುಮಾರು 2600 ಕೋಟಿ ರೂ. ವಿದ್ಯಾರ್ಥಿಗಳ ಬಸ್ ಪಾಸಿನ ಅನುದಾನದ ಹಣ ಬರಬೇಕಾಗಿದೆ ಎಂದು ತಿಳಿಸಿದರು.
ಅಪಘಾತ ಸಂಖ್ಯೆಗಳನ್ನು ಕಡಿಮೆ ಮಾಡಲು ತರಬೇತಿ ಕೇಂದ್ರಗಳನ್ನು ಅನೇಕ ಕಡೆಗಳಲ್ಲಿ ಪ್ರಾರಂಭ ಮಾಡಿದ್ದೇವೆ ಎಂದ ಸಚಿವರು, ನಾನು ಸಾರಿಗೆ ಮಂತ್ರಿಯಾದ ನಂತರ ಸಾರಿಗೆ ಸಂಸ್ಥೆಯ ಅಭಿವೃದ್ಧಿ ಬಗ್ಗೆ ಹಲವಾರು ರೀತಿಯ ಆಲೋಚನೆ ಮಾಡಲಾಗಿತ್ತು. ಕೊರೊನಾ ಬಂದ ಕಾರಣ ಸಂಸ್ಥೆಯ ನಾಲ್ಕು ನಿಗಮಗಳು ನಷ್ಟ ಅನುಭವಿಸಬೇಕಾಯಿತು ಎಂದರು.