ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಚುನಾವಣೆ ನಡೆಯುವ ವಿಧಾನಸಭಾ ಕ್ಷೇತ್ರಗಳ ಪ್ರಗತಿಗೆ ಉಪಚುನಾವಣೆ ನಿಗದಿಯಾದ ಬಳಿಕ ಸಮಗ್ರ ಅಭಿವೃದ್ಧಿ ಮಾಡುವ ಮಾತುಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳುತ್ತಿದ್ದಾರೆ. ಆದರೆ, 2 ವರ್ಷದಿಂದ ಈಕ್ಷೇತ್ರಗಳ ಅಭಿವೃದ್ಧಿ ಮಾಡಬೇಕು ಎಂಬುವುದು ಇರಲಿಲ್ಲವೇ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಮಸ್ಕಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಇತ್ತೀಚೆಗೆ ಪ್ರಚಾರ ಸಭೆಯಲ್ಲಿ ಹೇಳಿರುವುದು ಗಮನಕ್ಕೆ ಬಂತು. ಮಸ್ಕಿಯಲ್ಲಿ ಶಾಸಕರಾಗಿದ್ದವರ ಮಹಾತ್ಯಾಗ(?)ದಿಂದ ಬಿಎಸ್‌ವೈ ಅವರಿಗೆ ಅಧಿಕಾರ ಸಿಕ್ಕು 2 ವರ್ಷಗಳಾಗುತ್ತಾ ಬಂದಿವೆ. ಈ ವರೆಗೆ ಆ ಕ್ಷೇತ್ರದ ಅಭಿವೃದ್ಧಿ ಯಾಕಾಗಿರಲಿಲ್ಲ ಮಸ್ಕಿಯ ಅಭಿವೃದ್ಧಿ? ಪ್ರಗತಿಗೆ ಉಪಚುನಾವಣೆ ಮುಹೂರ್ತವಾಗಿತ್ತೇ ಎಂದು ಪ್ರಶ್ನಿಸಿದ್ದಾರೆ.
ಚುನಾವಣೆ ನಿಗದಿಯಾಗಿದ್ದರಿಂದ ಮಸ್ಕಿ ಅಭಿವೃದ್ಧಿಗೆ ಈಗ ಮುಹೂರ್ತ ಬಂದಿದೆ, ಒಪ್ಪೋಣ. ಆದರೆ, ವರ್ಷದ ಹಿಂದೆಯೇ ಚುನಾವಣೆಗಳಾದ ‘ಬಾಂಬೆ ತಂಡ’ದ ಸದಸ್ಯರ ಕ್ಷೇತ್ರಗಳ ಅಭಿವೃದ್ಧಿ ಎಷ್ಟಾಗಿದೆ? ಅವೆಲ್ಲವೂ ಭೂಲೋಕದ ಸ್ವರ್ಗಗಳಾಗಿವೆಯೇ ಸಿಎಂ ಯಡಿಯೂರಪ್ಪನವರೇ? ಚುನಾವಣಾ ಕಾಲದ ನಿಮ್ಮ ಅಭಿವೃದ್ಧಿಯ ಜಪ ಬೂಟಾಟಿಕೆತನದ್ದು ಎಂದು ನಿಮಗಾದರೂ ಅನಿಸದೇ ಎಂದು ಕಿಡಿಕಾರಿದ್ದಾರೆ.
ಮಸ್ಕಿ ಕ್ಷೇತ್ರವಿರಲಿ, ಬೇರಾವ ಕ್ಷೇತ್ರವೇ ಆಗಿರಲಿ ಅಭಿವೃದ್ಧಿಗೆ ಸರ್ಕಾರದಲ್ಲಿ ಹಣವೆಲ್ಲಿದೆ ಮುಖ್ಯಮಂತ್ರಿಗಳೇ? ರಾಜ್ಯದ ತೆರಿಗೆ ಹಣ, ಜನರ ಬೆವರಿನ ಋಣ ನಿಮ್ಮ ಸರ್ಕಾರದಲ್ಲಿರುವ ‘ಏಕಗವಾಕ್ಷಿ’ಗೆ ಆಪೋಷನವಾಗುತ್ತಿಲ್ಲವೇ? ಚುನಾವಣಾ ಕಾಲದಲ್ಲಿ ಮುಖ್ಯಮಂತ್ರಿ ಮತ್ತು ಅವರ ಸರ್ಕಾರದ ‘ಏಕಗವಾಕ್ಷಿ’ ಆಡುವ ಮಾತುಗಳಿಗೆ ಜನ ಮನ್ನಣೆ ನೀಡಬಾರದು ಎಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.