ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಒಬ್ಬ ಭ್ರಷ್ಟ ವ್ಯಕ್ತಿಯನ್ನು ರಾಜ್ಯದ ಮುಖ್ಯಮಂತ್ರಿ ಗದ್ದುಗೆ ಮೇಲೆ ಕೂರಿಸಿರುವ ಬಿಜೆಪಿ ನಾಯಕರಿಗೆ ಭ್ರಷ್ಟಾಚಾರ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ವಿ.ಎಸ್. ಉಗ್ರಪ್ಪ ಪ್ರಶ್ನಿಸಿದ್ದಾರೆ.
ಮಾಜಿ ಸಚಿವ ಕೃಷ್ಣ ಭೈರೇಗೌಡ , ಮಾಜಿ ಸಂಸದ ಉಗ್ರಪ್ಪ ಮತ್ತು ಬ್ರಿಜೇಶ್ ಕಾಳಪ್ಪ ಅವರು ಇಂದು ನಡೆಸಿದ ಜಂಟಿ ಸುದ್ದಿಗೋಷ್ಠಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ನಾವು ಅಧಿಕಾರಕ್ಕೆ ಬಂದರೆ ಕಪ್ಪು ಹಣವನ್ನು ದೇಶಕ್ಕೆ ಮರಳಿ ತರುತ್ತೇವೆ, ಲೋಕಪಾಲ ಜಾರಿ ಮಾಡುತ್ತೇವೆ, ಭ್ರಷ್ಟಾಚಾರವನ್ನು ತೊಲಗಿಸಿ ಭ್ರಷ್ಟರನ್ನು ಜೈಲಿಗಟ್ಟುತ್ತೇವೆ ಎಂದು ಬಿಜೆಪಿಯವರು ಜನರಿಗೆ ಆಶ್ವಾಸನೆ ನೀಡಿದ್ದರು. ಆದರೆ, ಇಂದು ಬಿಜೆಪಿ ಅಧಿಕಾರದಲ್ಲಿ ಭ್ರಷ್ಟಾಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲೋಕಪಾಲ ಈವರೆಗೆ ಜಾರಿಯಾಗಿಲ್ಲ. ಇನ್ನೂ ಕಪ್ಪು ಹಣದ ಬಗ್ಗೆ ಮಾತೇ ಇಲ್ಲದಂತಾಗಿದೆ. ಲೋಕಪಾಲ ಕಾಯ್ದೆ ಜಾರಿಗೆ ಬರಬೇಕು ಅಂತ ಹೋರಾಟ ಮಾಡಿದ್ದವರು ಇದೇ ಬಿಜೆಪಿಯವರು. ಆದ್ರೆ ಇಂದು ಆ ಬಗ್ಗೆ ಬಿಜೆಪಿಯ ಯಾವ ನಾಯಕರು ಮಾತನಾಡುತ್ತಿಲ್ಲ. ಕಪ್ಪು ಹಣ ದೇಶಕ್ಕೆ ವಾಪಸ್ ಬರುತ್ತೆ ಅಂತ ಹೇಳಿದ್ರೂ ಆ ಕೆಲಸ ಕೂಡ ಇವರಗೆ ಆಗಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಇನ್ನು ದೇವನಹಳ್ಳಿ ತಾಲೂಕು ಕೆಐಡಿಬಿ ಲ್ಯಾಂಡ್ ವಿಚಾರಕ್ಕೆ ಸಿಎಂ ಯಡಿಯೂರಪ್ಪ ವಿರುದ್ಧ ಹೈ ಕೋಟ್೯ ಆದೇಶ ಒಂದನ್ನು ಕೊಟ್ಟಿದೆ. ಇಂತಹ ಭ್ರಷ್ಟ ವ್ಯಕ್ತಿಯನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದ ಬಿಜೆಪಿಗೆ ಭ್ರಷ್ಟಾಚಾರ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ?” ಎಂದು ಪ್ರಶ್ನಿಸಿದರು.
ಯಾವ ಮುಖ ಇಟ್ಟುಕೊಂಡು ಬಿಜೆಪಿಯವರು ಯಡಿಯೂರಪ್ಪ ಅವರನ್ನು ಸಿಎಂ ಆಗಿ ಮುಂದುವರೆಸುತ್ತಾರೆ? ಚಾರ್ಜ್ ಶೀಟ್ ಹಾಕಿದ ಹಿನ್ನೆಲೆ ಯಡಿಯೂರಪ್ಪ ಟ್ರಯಲ್ ಫೇಸ್ ಮಾಡಲಿ. ಕಾಂಗ್ರೆಸ್ ಯಡಿಯೂರಪ್ಪ ಅವರ ರಾಜೀನಾಮೆಗೆ ಆಗ್ರಹಿಸುತ್ತದೆ ಎಂದರು.