ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪ ಸೇರಿ ಆರುಕ್ಕೂ ಹೆಚ್ಚು ಸಚಿವರ ವಿರುದ್ಧ ಶಾಸಕ ರೇಣುಕಾಚಾರ್ಯ ನೇತೃತ್ವದ 30 ಬಿಜೆಪಿ ಶಾಸಕರು ತಡರಾತ್ರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ.
ಭೇಟಿಯಾದ ಶಾಸಕರ ಮನವಿ ಮೇರೆಗೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರ ಗಮನಕ್ಕೆ ತಾರದೆ ಅವರ ಇಲಾಖೆಯ ಅನುದಾನವನ್ನು ಸಿಎಂ ಬಿಡುಗಡೆ ಮಾಡಿದ್ದಾರೆ ಎಂದು ಹೇಳಲಾಗಿದ್ದು, ಇದರಿಂದ ಈಶ್ವರಪ್ಪ ಅವರು ತಮ್ಮ ಇಲಾಖೆಯ ಅನುದಾನವನ್ನು ತಮ್ಮ ಗಮನಕ್ಕೆ ತರದೆ ಬಿಡುಗಡೆ ಮಾಡಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಎಂ ಅನುದಾನಕ್ಕೆ ಸಹಿ ಹಾಕಿರುವ ಬಗ್ಗೆ ಈಶ್ವರಪ್ಪ ಅಸಮಾಧಾನ ವಯ್ಕತಪಡಿಸಿದ್ದು, ಆ ಅನುದಾನವನ್ನು ತಡೆ ಹಿಡಿದಿದ್ದಾರೆ ಎಂದು ಬಿಜೆಪಿಯ ಬಲ್ಲ ಮೂಲಗಳು ತಿಳಿಸಿವೆ.
ಈಶ್ವರಪ್ಪ ಸೇರಿದಂತೆ ಆರು ಸಚಿವರ ವಿರುದ್ಧ ಶಾಸಕರು ಸಿಎಂಗೆ ದೂರು ಸಲ್ಲಿಸಿ ಅನುದಾನವನ್ನು ಬಿಡುಗಡೆ ಮಾಡಲು ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಶಾಸಕರ ದೂರಿನ ಹಿನ್ನೆಲೆಯಲ್ಲಿ ಸಿಎಂ ಮಾರ್ಚ್ 25 ರಂದು ಇಲಾಖಾ ಅಧಿಕಾರಿಗಳ ಸಭೆ ಕರೆದಿದ್ದಾರೆ ಎಂದು ತಿಳಿದುಬಂದಿದೆ.
ಏತನ್ಮಧ್ಯೆ, ರಾಜ್ಯ ಬಿಜೆಪಿ ಅಂಗಳದಲ್ಲಿ ಈಶ್ವರಪ್ಪ ಮತ್ತು ಸಿಎಂ ನಡುವೆ ಮತ್ತೆ ಶೀತಲ ಸಮರ ಆರಂವಾಗಿದೆಯೇ ಎಂಬ ಚರ್ಚೆಗಳು ಪ್ರಾರಂಭವಾಗಿವೆ. ಶಾಸಕ ರೇಣುಕಾಚಾರ್ಯರ ನೇತೃತ್ವದ 30 ಶಾಸಕರ ಗುಂಪು ಇತ್ತೀಚೆಗೆ ಯಡಿಯೂರಪ್ಪರ ಅವರನ್ನು ಭೇಟಿಯಾಗಿ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಬೇಕಾದ ಅನುದಾನವನ್ನು ಪಡೆಯಲು ಮುಂದಾಗಿರುವುದೆ ಈ ಶೀತಲ ಸಮರಕ್ಕೆ ಕಾರಣ ಎಂಬ ಮಾತುಕೂಡ ಕೇಳಿ ಬಂದಿದೆ.