ವಿಜಯಪಥ ಸಮಗ್ರ ಸುದ್ದಿ
ಅಹಮದಾಬಾದ್: ಗುಜರಾತ್‌ನ ಕೋವಿಡ್ ಆರೈಕೆ ಕೇಂದ್ರವೊಂದು ಇದೀಗ ವಿಶಿಷ್ಟ ಚಿಕಿತ್ಸಾ ಪದ್ಧತಿಯ ಮೂಲಕ ದೇಶದ ಗಮನ ಸೆಳೆದಿದೆ. ಇಲ್ಲಿ ಗೋ ಮೂತ್ರ, ಸಗಣಿ, ಹಾಲು, ತುಪ್ಪ ಹಾಗೂ ಮೊಸರನ್ನು ಬಳಸಿದ ‘ಪಂಚಗವ್ಯ’ ಔಷಧವನ್ನು ಕೋವಿಡ್ ಸೋಂಕಿತರಿಗೆ ನೀಡಿ ಗುಣಮುಖರನ್ನಾಗಿ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಈ ಕೋವಿಡ್ ಆರೈಕೆ ಕೇಂದ್ರ ಇರುವುದು ಗುಜರಾತ್’ನ ಬನಸ್ಕಾಂತ ಜಿಲ್ಲೆಯ ದಿಸಾ ತಾಲೂಕಿನ ಟೆಟೋಡಾ ಗ್ರಾಮದಲ್ಲಿ. ಈ ಗ್ರಾಮದಲ್ಲಿ ರಾಜಾರಾಮ್ ಗೋಶಾಲೆ ಆಶ್ರಮ ಎಂಬ ಟ್ರಸ್ಟ್ ನೂತನ ಕೋವಿಡ್ ಆರೈಕೆ ಕೇಂದ್ರವನ್ನು ತೆರೆದಿದೆ. ಇಲ್ಲಿ ನೂರು ರೋಗಿಗಳಿಗೆ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಮೇ 6 ರಿಂದ ಅವಕಾಶ ಮಾಡಿಕೊಟ್ಟಿದ್ದು, ಸದ್ಯ ಇಲ್ಲಿ 30 ರೋಗಿಗಳು ಚಿಕಿತ್ಸೆಗೆ ದಾಖಲಾಗಿದ್ದಾರೆ.
ರಾಜಾರಾಮ್ ಗೋಶಾಲೆ ಆಶ್ರಮದಲ್ಲಿ 5,000ಕ್ಕೂ ಹೆಚ್ಚು ಗೋವುಗಳು ಇವೆ. ವಿಶಾಲವಾದ ಗೋಶಾಲೆಯಲ್ಲಿ ಕೋವಿಡ್ ಆರೈಕೆ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ. ಅಲೋಪತಿ ಜತೆಗೆ ‘ಪಂಚಗವ್ಯ’ ಆಯುರ್ವೇದ ಚಿಕಿತ್ಸೆಯ ಸೌಲಭ್ಯವನ್ನು ನೀಡಲಾಗುತ್ತಿದೆ.
ರೋಗಿಗಳ ಆರೈಕೆಗಾಗಿ ಇಬ್ಬರು ಎಂಬಿಬಿಎಸ್ ವೈದ್ಯರು, ನಾಲ್ಕು ಆಯುರ್ವೇದ ವೈದ್ಯರು ಹಾಗೂ ದಾದಿಯರನ್ನು ನೇಮಿಸಲಾಗಿದೆ. ಕೋವಿಡ್’ಗೆ ಆರ್ಯುರ್ವೇದ ಔಷಧಗಳು ರಾಮಬಾಣವಾಗಿದೆ. ಈ ಹಿನ್ನೆಲೆಯಲ್ಲಿ ಗೋ ಮೂತ್ರ, ಸಗಣಿ, ಹಾಲು, ತುಪ್ಪ ಮತ್ತು ಮೊಸರನ್ನು ಒಳಗೊಂಡ “ಪಂಚಗವ್ಯ” ತಯಾರಿಸಲಾಗಿದ್ದು, ಇದನ್ನು ರೋಗಿಗಳಿಗೆ ನೀಡಿ ಗುಣಪಡಿಸಲಾಗುವುದು ಎಂದು ಟ್ರಸ್ಟಿ ರಾಮ ರತನ್ ದಾಸ್ ಹೇಳುತ್ತಾರೆ.
ಆದರೆ, ಮೇ 6ರಿಂದ ಆರಂಭವಾಗಿರುವ ಈ ಚಿಕಿತ್ಸಾ ಕೇಂದ್ರದಲ್ಲಿ ಈ ಚಿಕಿತ್ಸೆ ಎಷ್ಟು ಪರಿಣಾಮಕಾರಿ ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.