ವಿಜಯಪಥ ಸಮಗ್ರ ಸುದ್ದಿ
ಬನ್ನೂರು: ಕೊರೊನಾ ಮಹಾಮಾರಿ ರಾಜ್ಯವನ್ನು ತೀವ್ರವಾಗಿ ಕಾಡುತ್ತಿದ್ದು, ಇದರ ನಡುವೆಯೇ ಹಲವು ಹೋಬಳಿ ಕೇಂದ್ರಗಳಲ್ಲಿ ಕೋವಿಡ್ ಟೆಸ್ಟ್ ಸ್ಥಗಿತಗೊಳಿಸಿರುವುದರಿಂದ ಸಾವಿರಾರು ಜನರಿಗೆ ತೊಂದರೆಯಾಗುತ್ತಿದೆ.
ಬನ್ನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ ಸ್ಥಗಿತಗೊಳಿಸಿರುವುದರಿಂದ ಹೋಬಳಿಯ ಹಲವಾರು ಗ್ರಾಮದ ಜನರಿಗೆ ತುಂಬ ತೊಂದರೆಯಾಗುತ್ತಿದೆ. ಹೀಗಾಗಿ ಮತ್ತೆ ಕೋವಿಡ್ ಪರೀಕ್ಷೆ ಮಾಡುವುದನ್ನು ಪುನರ್ ಆರಂಭಿಸುವ ನಿಟ್ಟಿನಲ್ಲಿ ಕ್ಷೇತ್ರದ ಶಾಸಕ ಅಶ್ವಿನ್‌ಕುಮಾರ್ ಅವರು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರ ಪರವಾಗಿ ಬನ್ನೂರು ಹೋಬಳಿಯ ಬಿ.ಸೀಹಳ್ಳಿ ಗ್ರಾಮದ ಯುವಕ ರಾಜೂಗೌಡ ಮನವಿ ಮಾಡಿದ್ದಾರೆ.
ಈ ಹಿಂದೆ ಬನ್ನೂರಿನ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ ನಡೆಸುತ್ತಿದ್ದರು. ಆಗ ಈ ಭಾಗದ ಜನರಿಗೆ ತುಂಬಾ ಅನುಕೂಲಕರವಾಗಿತ್ತು, ಈಗ ಪರೀಕ್ಷೆ ಮಾಡುವುದನ್ನು ಕಳೆದ 4 ದಿನಗಳಿಂದ ನಿಲ್ಲಿಸಿದ್ದು, ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಈ ಭಾಗದ ಜನರು ತಿ.ನರಸೀಪುರ ಮತ್ತು ಮೈಸೂರಿಗೆ ಹೋಗಬೇಕಾಗಿದೆ.
ಇದರಿಂದ ಹೋಬಳಿಯ ಸಾವಿರಾರು ಜನರಿಗೆ ತುಂಬ ತೊಂದರೆಯಾಗಿದೆ. ಹೀಗಾಗಿ ಮತ್ತೆ ಕೋವಿಡ್ ಪರೀಕ್ಷೆಯನ್ನು ಬನ್ನೂರಿನ ಆರೋಗ್ಯ ಕೇಂದ್ರದಲ್ಲೇ ಮೊದಲಿನಂತೆ ನಡೆಸಲು ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.