ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ(103) ಅವರು ನಿಧನರಾಗಿದ್ದಾರೆ.
ಹೃದಯ ಸಂಬಂಧಿ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದೊರೆಸ್ವಾಮಿ ಅವರು ಬುಧವಾರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಕೊರೊನಾದಿಂದ ಗುಣಮುಖರಾದ 4 ದಿನದ ಬಳಿಕ ದೊರೆಸ್ವಾಮಿ ಅವರಿಗೆ ಮತ್ತೆ ಉಸಿರಾಟದ ತೊಂದರೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ 8 ದಿನದಿಂದ ನಗರದ ಜಯದೇವ ಆಸ್ಪತ್ರೆಯಲ್ಲಿ ಮತ್ತೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಪದೇಪದೆ ನಂಗೆ ವಯಸ್ಸಾಗಿದೆ. ಆಸ್ಪತ್ರೆಗೆ ಬರಲ್ಲ, ನನ್ನ ಬೆಡ್ ಯುವಕರಿಗೆ ಉಪಯೋಗವಾಗಲಿ ಅಂತ ದೊರೆಸ್ವಾಮಿ ಈ ಹಿಂದೆ ಹೇಳಿದ್ದರು. ಈ ವೇಳೆ ಜಯದೇವ ವೈದ್ಯ ಡಾ. ಮಂಜುನಾಥ್ ಅವರು, ಬೆಡ್ ಕೊರತೆ ಇಲ್ಲ ಅಂತ ಮನವೊಲಿಸಿ ಮತ್ತೆ ಉಸಿರಾಟದ ತೊಂದರೆ ಬಂದಾಗ ಆಸ್ಪತ್ರೆಗೆ ದಾಖಲು ಮಾಡಿದರು.
ಎಚ್. ಎಸ್. ದೊರೆಸ್ವಾಮಿ ಪೂರ್ಣ ಹೆಸರು ಹಾರೋಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ. ಮಹಾತ್ಮ ಗಾಂಧಿಯ ‘ಮೈ ಅರ್ಲಿ ಲೈಫ್’ ಪುಸ್ತಕವು ದೊರೆಸ್ವಾಮಿ ಸ್ವಾತಂತ್ರ್ಯ ಚಳವಳಿಗೆ ಧುಮುಕಲು ಪ್ರೇರಣೆ ನೀಡಿತು.
ಏಪ್ರಿಲ್ 10, 1918ರಲ್ಲಿ ಜನಿಸಿದ್ದ ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಹಲವು ಸಾಮಾಜಿಕ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಬೆಂಗಳೂರು ಸುತ್ತಮುತ್ತಲಿನ ಸರ್ಕಾರಿ ಭೂಮಿ ಒತ್ತುವರಿ ವಿರುದ್ಧ ನಡೆದ ಹೋರಾಟದಲ್ಲಿ ಭಾಗವಹಿಸಿದ್ದರು.
ಬರವಣಿಗೆಯಲ್ಲೂ ಸಕ್ರಿಯವಾಗಿ ತೊಡಗಿಕೊಂಡಿದ್ದ ದೊರೆಸ್ವಾಮಿ 98ನೇ ವಯಸ್ಸಿನಲ್ಲಿ ‘ಭೂಗಳ್ಳರು ಕಬಳಿಸಿದ ಸರ್ಕಾರಿ ಜಮೀನನ್ನು ಉಳಿಸಿದ ಹೋರಾಟ’ ಎಂಬ ಪುಸ್ತಕವನ್ನು ಬರೆದಿದ್ದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಗಾಂಧೀವಾದಿ, ಪತ್ರಕರ್ತ, ಸಮಾಜ ಸೇವಕರು, ನಾಡುನುಡಿ ಜನಪರ ಕಾಳಜಿಗಳಿಗೆ ಸದಾ ಧ್ವನಿಯಾಗಿದ್ದ ಶತಾಯುಷಿ ಹೆಚ್.ಎಸ್.ದೊರೆಸ್ವಾಮಿ ವಿಧಿವಶರಾದ ಸುದ್ದಿ ಕೇಳಿ ಅತೀವ ದುಃಖವಾಗಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತಾ, ದೇವರು ಅವರ ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಕೋರುತ್ತೇನೆ.
— B.S. Yediyurappa (@BSYBJP) May 26, 2021