ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ಪಟ್ಟಣದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ವತಿಯಿಂದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಕೊರೊನಾ ಸೋಂಕಿತರ ಆರೈಕೆಗಾಗಿ ಎರಡು ಆಕ್ಸಿಜನ್ ಕಾನ್ಸಂಟ್ರೇಟರ್ ಯಂತ್ರಗಳನ್ನು ಶಾಸಕ ಕೆ.ಮಹದೇವ್ ಮೂಲಕ ತಾಲೂಕು ಆಡಳಿತಕ್ಕೆ ಹಸ್ತಾಂತರಿಸಿದರು.
ಈ ವೇಳೆ ಶಾಸಕ ಮಾತನಾಡಿ, ರಾಜ್ಯದ ಜನತೆ ಕೊರೊನಾದಂತಹ ಸಂಕಷ್ಟ ಸಂದರ್ಭದಲ್ಲಿದ್ದಾಗ ಅವರ ನೆರವಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮುಂದಾಗಿರುವುದು ಶ್ಲಾಘನೀಯ, ಸೇವಾ ಮನೋಭಾವದ ಮೂಲಕ ರಾಜ್ಯಾದ್ಯಂತ ಹತ್ತು ಹಲವು ಸಾಮಾಜಿಕ ಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಸರ್ಕಾರದ ಜತೆ ಕೈಜೋಡಿಸಿ ನೊಂದವರಿಗೆ ಸಹಾಯ ಮಾಡಿ ಮಾದರಿಯಾಗಿದ್ದಾರೆ ಎಂದರು.
ಸಂಸ್ಥೆಯ ಕರಾವಳಿ ಪ್ರಾದೇಶಿಕ ವಿಭಾಗದ ನಿರ್ದೇಶಕ ವಸಂತ್ ಸಾಲಿಯಾನ್ ಮಾತನಾಡಿ, ರಾಜ್ಯದಲ್ಲಿ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಸೋಂಕಿತರ ಆರೈಕೆಗೆ ಸಂಸ್ಥೆಯು ಸಹಾಯ ಮಾಡುವ ಉದ್ದೇಶದಿಂದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ರಾಜ್ಯದ ಹಲವೆಡೆಯ ಆಸ್ಪತ್ರೆಗಳಿಗೆ 2.5 ಕೋಟಿ ವೆಚ್ಚದ 100 ಟನ್ ಆಕ್ಸಿಜನ್ ಪೂರೈಕೆ, ನಾಲ್ಕು ಸ್ಥಳಗಳಲ್ಲಿ ಕೊವಿಡ್ ಕೇರ್ ಸೆಂಟರ್ ಸ್ಥಾಪನೆ, ಮುನ್ನೂರಕ್ಕೂ ಹೆಚ್ಚು ಆಕ್ಸಿಜನ್ ಕಾನ್ಸನ್ ಟ್ರೇಟರ್ ಹಾಗೂ ಇಪ್ಪತ್ತಕ್ಕೂ ಹೆಚ್ಚು ವೆಂಟಿಲೇಟರ್ ವಿತರಿಸಿ ಸಾಮಾನ್ಯ ಜನರ ಸಹಕಾರಕ್ಕೆ ಮುಂದಾಗಿದೆ ಎಂದರು.
ಸಂಸ್ಥೆಯ ಕೊಡಗು ಜಿಲ್ಲಾ ನಿರ್ದೇಶಕ ಡಾ.ಯೋಗೀಶ್ ಮಾತನಾಡಿ ರಾಜ್ಯದ ಜನತೆ ಕೊರೊನಾ ಸಂಕಷ್ಟದಲ್ಲಿರುವುದನ್ನು ಮನಗಂಡು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡಿದ ಸಾಲದ ಹಣದ ಮರುಪಾವತಿಗೆ ಮುಂಬರುವ ಡಿಸೆಂಬರ್ ತಿಂಗಳವರೆಗೆ ಕಾಲಾವಕಾಶ ನೀಡಿರುವ ಬಗ್ಗೆ ಈಗಾಗಲೇ ಸಂಸ್ಥೆ ವತಿಯಿಂದ ಮಾಹಿತಿ ನೀಡಲಾಗಿದೆ ಎಂದರು.
ತಹಸೀಲ್ದಾರ್ ಕೆ.ಚಂದ್ರಮೌಳಿ, ತಾಪಂ ಇಒ ಸಿ.ಆರ್. ಕೃಷ್ಣಕುಮಾರ್, ಪುರಸಭಾ ಅಧ್ಯಕ್ಷ ಮಂಜುನಾಥ್ ಸಿಂಗ್, ಹಿರಿಯ ಆರೋಗ್ಯ ನಿರೀಕ್ಷಕ ಕೆ.ಆರ್ ಪ್ರಕಾಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಲೂಕು ಯೋಜನಾಧಿಕಾರಿ ಸುರೇಶ್ ಶೆಟ್ಟಿ, ಕೃಷಿ ಅಧಿಕಾರಿ ಉಮೇಶ್,ಮುಖಂಡ ಎ.ಟಿ. ರಂಗಸ್ವಾಮಿ ಮತ್ತಿತರರು ಇದ್ದರು.