ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಆರಂಭವಾಗಲಿರುವ 4 ವರ್ಷಗಳ ಪದವಿಯಲ್ಲಿ ಕನ್ನಡ ಭಾಷಾ ಕಲಿಕೆಯನ್ನು 1 ವರ್ಷಕ್ಕೆ ಸೀಮಿತಗೊಳಿಸುವ ಉನ್ನತ ಶಿಕ್ಷಣ ಸಮಿತಿಯ ಪ್ರಸ್ತಾವ ನಿರಾಸೆ ತಂದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕನ್ನಡ ಭಾಷಾ ಕಲಿಕೆ ಅದೊಂದು ವಿಷಯ ಮಾತ್ರವಲ್ಲ, ಯುವ ಸಮುದಾಯದಲ್ಲಿ ಸಾಕ್ಷಿಪ್ರಜ್ಞೆ ಬಿತ್ತುವ, ಅವರನ್ನು ಸೂಕ್ಷ್ಮಮತಿಗಳನ್ನಾಗಿ ಮಾಡುವ ಯಶಸ್ವಿ ಪ್ರಯತ್ನ ಎಂದು ಹೇಳಿದ್ದಾರೆ.
ರಕ್ತಕ್ಕೆ ಅಂಟಿದ ಭಾಷೆ ಕಲಿಕೆಯನ್ನು 1 ವರ್ಷಕ್ಕೆ ಮಿತಿಗೊಳಿಸುವುದು ಅವೈಜ್ಞಾನಿಕ. ಈ ಬಗ್ಗೆ ಡಿಸಿಎಂ ಡಾ.ಅಶ್ವಥ್‌ನಾರಾಯಣ್ ಸ್ಪಷ್ಟನೆ ನೀಡಿದ್ದಾರೆ. ಈಗಿನ ವ್ಯವಸ್ಥೆಯಂತೆ 2 ವರ್ಷದ ಕನ್ನಡ ಕಲಿಕೆಗೆ ತೊಂದರೆ ಇಲ್ಲ ಎಂದು ಹೇಳಿರುವುದು ಸ್ವಲ್ಪ ಸಮಾಧಾನ ತಂದಿದೆ. ಅದರೆ, 1ವರ್ಷಕ್ಕೆ ಮಿತಿಗೊಳಿಸುವ ಪ್ರಯತ್ನಗಳು ನಡೆದರೆ ಪರಿಣಾಮ ಕೆಟ್ಟದಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.